ಬೆಳ್ತಂಗಡಿ, ಜೂ 28 (Daijiworld News/MSP): ಪಡುಮಲೆಯ ಪರವ ಸಮುದಾಯದ ತುಳುನಾಡಿನ ಕುಂಬಳೆ ಸೀಮೆಯಯಲ್ಲಿ ದೈವನರ್ತಕರಾಗಿ ಹೆಸರು ಮಾಡಿರುವ ರವೀಶ್ ಪರವ ಪಡುಮಲೆ , ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಉದ್ಯೋಗದಲ್ಲಿದ್ದರೂ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ ಮುಂದುವರಿಸಿಕೊಂಡು ಹೋಗುತ್ತಿರುವ ರವೀಶ್ ಪರವ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಇವರು ಮರಳಿನ ಅಲಭ್ಯತೆ ಹಿನ್ನೆಲೆಯಲ್ಲಿ ನೇತ್ರಾವತಿ ಮತ್ತು ಗುರುಪುರ ನದಿ ಅಳಿವೆಯ ಮರಳನ್ನು ಕಬ್ಬಿಣದ ಸರಳುಗಳಿರುವ ಕಾಂಕ್ರೀಟ್ ನಲ್ಲಿ ಬಳಸಿರುವುದರಿಂದ ಆಗುವ ಪರಿಣಾಮಗಳ ಕುರಿತು ರವೀಶ್ ಅವರು ಅಧ್ಯಯನ ನಡೆಸಿದ್ದರು. ವಿಟಿಯೂ ಮಾಜಿ ರಿಜಿಸ್ಟಾರ್ ಮತ್ತು ಮಂಗಳೂರಿನ ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯ ನಿರ್ದೇಶಕ ಡಾ.ಕೆ.ಇ ಪ್ರಕಾಶ್ ಮತ್ತು ಬೆಳಗಾವಿ ಎಐಟಿಎಂ ಸಿವಿಲ್ ವಿಭಾಗದ ಪ್ರೊಫೆಸರ್ ಡಾ.ಬಿ.ಟಿ.ಸುರೇಶ್ ಬಾಬು ಮಾರ್ಗದರ್ಶನದಲ್ಲಿ ರವೀಶ್ ಮಂಡಿಸಿದ " ಇಂಪ್ಯಾಕ್ಟ್ ಆಫ್ ಸಾಲಿಸಿಟಿ ಆನ್ ಕ್ವಾಲಿಟಿ ಆಫ್ ಎಸ್ಟುವರಿ ಸ್ಯಾಂಡ್ ಆನ್ ಕಾಂಕ್ರೀಟ್ ಇನ್ ಕೋಸ್ಟಲ್ ರೀಜನ್ ಆಫ್ ಕರ್ನಾಟಕ" ಮಹಾಪ್ರಬಂಧವನ್ನು ಮಂಡಿಸಿದ್ದರು. ಈ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.
ರವೀಶ್ ಪರವ ಉಪನ್ಯಾಸಕರಾಗಿರುವ ಜತೆಗೆ ಪಾರಂಪರಿಕವಾಗಿ ಬಂದಿರುವ ದೈವಾರಾಧನಾ ಕಲೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕುಂಬಳೆ ಸಿಮೆ ವ್ಯಾಪ್ತಿಯ ಪ್ರಮುಖ ದೈವಗಳಾದ ವ್ಯಾಘ್ರ ಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಧೂಮಾವತಿ. ರುದ್ರ ಚಾಮುಂಡಿ ಮುಂತಾದ ದೈವಗಳ ನರ್ತನ ಮಾಡುತ್ತಾರೆ .
ದೈವ ನರ್ತನ ಸೇವೆ ಮಾಡುವ ಸಮುದಾಯದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲಿಗರು ಎಂಬ ಹೆಗ್ಗಳಿಕೆ ಇವರಿಗೆ ಸಂದಿದೆ.