ಉಡುಪಿ, ಜೂ27(Daijiworld News/SS): ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಬೇಕಾಗುತ್ತೆ ಎಂಬ ಸಿ.ಎಂ ಹೇಳಿಕೆ, ವರ್ತನೆ ಖಂಡನೀಯ. ಮುಖ್ಯಮಂತ್ರಿ ಇಂತಹ ಉಡಾಫೆ ಮಾತು ಆಡುವುದು ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಡಾಫೆಯ, ಹತಾಶೆಯ, ಅತಿರೇಕದ, ಸರ್ವಾಧಿಕಾರಿತನದ ಮಾತನ್ನಾಡಿದ್ದಾರೆ. ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಬೇಕಾಗುತ್ತೆ ಎಂಬ ಸಿ.ಎಂ ಹೇಳಿಕೆ, ವರ್ತನೆ ಖಂಡನೀಯ ಎಂದು ಕಿಡಿಕಾರಿದರು.
ಸಿ.ಎಂ ಗ್ರಾಮ ವಾಸ್ತವ್ಯ ಪ್ರಚಾರಕ್ಕೆ ಮಾತ್ರ. ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಪಂಚತಾರಾ ಹೋಟೆಲ್'ನಿಂದ ಗ್ರಾಮವಾಸ್ತವ್ಯಕ್ಕೆ ತೆರಳಿದ್ದರಿಂದ ಸಿ.ಎಂಗೆ ಸವಲತ್ತು ಅನಿವಾರ್ಯ ಇರಬಹುದು ಎಂದು ವ್ಯಂಗ್ಯವಾಡಿದರು.
ಬಡವರ ಕಷ್ಟಕ್ಕೆ ಸ್ಪಂದನೆ ಕೊಡಬೇಕು ಅಂತ ಸಿಎಂಗೆ ಅನಿಸಿಲ್ಲ. ಕರ್ನಾಟಕ ರಾಜ್ಯದಲ್ಲಿ ಒಂದೇ ಕ್ಷೇತ್ರದಲ್ಲಿ ನೀವು ಗೆದ್ದವರು. ಅಧಿಕಾರ ಬೇಡ ಅನಿಸಿದರೆ ರಾಜೀನಾಮೆ ಕೊಡುವುದೇ ಸೂಕ್ತ. ಬಿಜೆಪಿ ನಿಮ್ಮ ವರ್ತನೆಯನ್ನು ಗಮನಿಸುತ್ತಿದೆ. ಸರ್ವಾಧಿಕಾರದ ವರ್ತನೆ ಮುಂದುವರೆದರೆ ರಾಜ್ಯಾದ್ಯಂತ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ನೀವು ಆರೂವರೆ ಕೋಟಿ ಜನರ ಹಕ್ಕುಗಳನ್ನು, ಸಮಸ್ಯೆಗಳನ್ನು ಕೇಳಬೇಕು. ನೀವು ಉಢಾಫೆ ಮಾತು ಆಡುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಂಡವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಇಂತಹ ಉಡಾಫೆ ಮಾತು ಆಡುವುದು ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಕುಮಾರಸ್ವಾಮಿ ರಾಯಚೂರಿನ ಕರೇಗುಡ್ಡ ಎಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಆ ವೇಳೆ ಸ್ಥಳಕ್ಕೆ ಮುತ್ತಿಗೆ ಹಾಕಿದ ಕೆಲವರು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯನ್ನು ಪ್ರಶ್ನೆ ಮಾಡುತ್ತಾ ಸಿಎಂ ಕುಳಿತಿದ್ದ ಬಸ್ಗೆ ಅಡ್ಡ ಹಾಕಿದ್ದರು. ಆ ಸಂದರ್ಭ ಪ್ರತಿಭಟನಾನಿರತರ ವಿರುದ್ಧ ಗುಡುಗಿದ್ದ ಕುಮಾರಸ್ವಾಮಿ ದಾರಿ ಬಿಡದಿದ್ದರೆ ಲಾಠಿ ಚಾರ್ಜ್ ಮಾಡಿಸುವುದಾಗಿ ಧಮ್ಕಿ ಹಾಕಿದ್ದರು. ಬಳಿಕ ಕ್ಷಮೆ ಕೇಳಿದ್ದರು.