ಮಂಗಳೂರು, ಜೂ27(Daijiworld News/SS): ಕರಾವಳಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಆರಂಭವಾಗಿದೆ. ದ.ಕ ಸೇರಿದಂತೆ ಉಡುಪಿಯಲ್ಲಿ ತಡವಾಗಿ ನಾಡದೋಣಿ ಮೀನುಗಾರಿಕೆ ಅರಂಭವಾದರೂ ಮೀನುಗಾರರಿಗೆ ಸಂಪಾದನೆಯಿಲ್ಲ ಎನ್ನಲಾಗಿದೆ. ಸರಿಯಾದ ಇಳುವರಿ ಇಲ್ಲದೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಮೀನುಗಾರರನ್ನು ಅವರಿಸಿದೆ. ಈ ಹಿನ್ನಲೆಯಲ್ಲಿ, ಕರಾವಳಿಯ ಕಡಲ ಮಕ್ಕಳು ದೇವರ ಮೊರೆ ಹೋಗಿದ್ದಾರೆ.
ದಕ್ಷಿಣ ಕನ್ನಡ ಸೇರಿದಂತೆ ಉಡುಪಿಯಲ್ಲಿ ದೋಣಿಗಳು ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದು, ಅಲ್ಪ ಪ್ರಮಾಣದಲ್ಲಿ ಮೀನು ಸಿಕ್ಕಿದೆ. ಹೆಚ್ಚಿನ ಮೀನುಗಾರರು ಬರಿಗೈಯಲ್ಲಿ ಮರಳಿದ್ದಾರೆ. ನಾಡದೋಣಿ ಮೀನುಗಾರಿಕೆಯಲ್ಲಿ ಮೀನುಗಳು ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದೆ ಇರುವುದರಿಂದ ವರ್ತಕರು ಸೇರಿ ಎಲ್ಲರ ಕೈಯ್ಯಲ್ಲಿ ಹಣದ ಚಲಾವಣೆಯಿಲ್ಲ. ಮಹಿಳೆಯರೂ ಕೂಡ ದುಬಾರಿ ಬೆಲೆ ಕೊಟ್ಟು ಮೀನು ಖರೀದಿ ಮಾಡುತ್ತಿದ್ದಾರೆ. ಗ್ರಾಹಕರೂ ಕೂಡ ಹತ್ತಿರ ಸುಳಿಯದಿರುವುದರಿಂದ ಮೀನುಗಾರರ ಜೀವನ ಕಷ್ಟವಾಗಿದೆ ಎನ್ನಲಾಗಿದೆ.
ಉತ್ತಮ ಮಳೆಯಾಗದಿದ್ದರೆ ಮೀನು ಸಿಗುವುದು ಕಷ್ಟ. ಮಳೆ ಕೊರತೆಯಾಗಿದ್ದು, ಒಂದೂ ನೆರೆ ಬಾರದ ಕಾರಣ ಸಿಹಿನೀರು ಕಡಲಿಗೆ ಸೇರಿಲ್ಲ. ಇದೇ ಕಾರಣ ಮೀನುಗಳು ಕರಾವಳಿಗೆ ಬಂದಿಲ್ಲ. ಅಲ್ಲದೆ ಇಲ್ಲಿನ ಬೃಹತ್ ಉದ್ಯಮಗಳ ತ್ಯಾಜ್ಯ ನೀರು ವಿರ್ಸಜನೆ ಕಾರಣ ಮೀನಿಗೆ ಬರ ಉಂಟಾಗಿದೆ ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಾವಳಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಬಾರಿ ಹೊಡೆತ ಬಿದ್ದಿರುವ ಹಿನ್ನಲೆಯಲ್ಲಿ, ಕಡಲ ಮಕ್ಕಳು ದೇವರ ಮೊರೆ ಹೋಗಿದ್ದಾರೆ. ಮಂಗಳೂರಿನಲ್ಲಿ ಮೀನುಗಾರರು ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ. ಹೇರಳವಾಗಿ ಮೀನು ಸಿಗುವಂತೆ ಆಶೀರ್ವದಿಸು ತಾಯೇ ಎಂದು ಪ್ರಾರ್ಥಿಸಿದ್ದಾರೆ. ಮಲ್ಪೆ ಬಂದರಿನಲ್ಲಿಯೂ ಸಾವಿರಕ್ಕೂ ಅಧಿಕ ಮಂದಿ ಮೀನುಗಾರರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ್ದಾರೆ. ಒಳ್ಳೆಯ ಮೀನುಗಾರಿಕೆ ನಡೆದು, ಮೀನುಗಾರರ ಬದುಕು ಹಸನಾಗಲು ದೇವರಲ್ಲಿ ಪ್ರಾರ್ಥಿಸಿದ್ದಾರೆ.