ಉಡುಪಿ, ಜೂ 26 (Daijiworld News/SM): ಇಲ್ಲಿನ ಕುಂಜಿಬೆಟ್ಟುವಿನಲ್ಲಿ ಕಳೆದ ಮೂರು ತಿಂಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಅಗೆದು ಹಾಕಿದ ಒಳಚರಂಡಿಯನ್ನು, ಇಂದಿಗೂ ದುರಸ್ಥಿಗೊಳಿಸಿಲ್ಲ. ಅಲ್ಲದೆ, ರಸ್ತೆ ಕಾಮಗಾರಿ ಮಾಡುವವರು ನಿರ್ಲಕ್ಷ್ಯತನದಿಂದ ಮನೆಯಿಂದ ಡೈನೇಜ್ ಗುಂಡಿಗೆ ಹಾಕಿಲಾಗಿರುವ ಪೈಪ್ ಗಳನ್ನು ಹಾನಿಮಾಡಲಾಗಿದೆ. ಪರಿಣಾಮ ಕೊಳಕು ನೀರು ಚರಂಡಿಯಿಲ್ಲದೆ ರಸ್ತೆಯುದ್ದಕ್ಕೂ ಹರಿದು ಸುತ್ತಲಿನ ಮನೆಗಳಿಗೆ, ಆ ದಾರಿಯಲ್ಲಿ ನಡೆದಾಡುವವರಿಗೆ ತೊಂದರೆಯನ್ನುಂಟು ಮಾಡುತ್ತಿದ್ದು, ಮೂಗು ಮುಚ್ಚಿಕೊಂಡು ತೆರಳುವ ಪರಿಸ್ಥಿತಿಯನ್ನು ತಂದೊಡ್ಡಿದೆ.
ಇಷ್ಟೇ ಅಲ್ಲದೆ, ಈ ಪ್ರದೇಶ ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸ್ಥಳೀಯ ನಿವಾಸಿಯಾದ ಹರಿ ಉಪಾದ್ಯಾಯ ಅವರ ಮನೆ ಸಮೀಪದ ರಾ.ಹೆ ರಸ್ತೆ ಕಾಮಗಾರಿ ನಡೆಯುವಾಗ, ಕೊಳಚೆ ನೀರಿನ ಪೈಪುಗಳು ತುಂಡಾಗಿ ಚರಂಡಿಯಲ್ಲಿ ನೀರು ನಿಂತು, ಇದೀಗ ದುರ್ವಾಸನೆ ಬೀರುತ್ತಿದೆ. ಅಲ್ಲದೆ ಮಳೆಯಿಂದಾಗಿ ಸಮಸ್ಯೆ ಉಲ್ಬಣಗೊಂಡಿದೆ.
ಈ ಭಾಗದ ಚರಂಡಿ ಸಮಸ್ಯೆಯನ್ನು ಉಡುಪಿ ನಗರಸಭೆಯ ಗಮನಕ್ಕೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದ್ದು ಇದುವರೆಗೂ ಸಮರ್ಪಕ ಕ್ರಮಗಳನ್ನು ಕೈಗೊಂಡಿಲ್ಲ. ಮಳೆಗಾಲದಲ್ಲಿ ಚರಂಡಿ, ರಸ್ತೆ ಅಗೆದು ಸಾರ್ವಜನಿಕರಿಗೆ ತೊಂದರೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ಮಕ್ಕಳು ಓಡಾಡುವ ರಸ್ತೆ ಪಕ್ಕದಲ್ಲಿ ಸಮರ್ಪಕ ಸುರಕ್ಷಿತ ಕ್ರಮಗಳನ್ನು ಕೂಡ ಅಳವಡಿಸಿಲ್ಲ ಎಂಬುವುದಾಗಿ ಸಾರ್ವಜನಿಕರು ದೂರಿದ್ದಾರೆ.
ಇನ್ನು ಅಗೆದ ಚರಂಡಿಯ ಇಕ್ಕೆಲದ ತಿರುವಿನಲ್ಲಿ ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಂಡಿಲ್ಲ. ಪರಿಣಾಮ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇಷ್ಟಾದರೂ ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆಯವರು ಯಾವುದೇ ಸಂಬಂಧ ವಿಲ್ಲದಂತೆ ನಟಿಸುತ್ತಿದ್ದಾರೆ. ಇನ್ನು ಇದು ಕೇವಲ ಕುಂಜಿಬೆಟ್ಟುವಿನ ಜನರ ಸಮಸ್ಯೆ ಮಾತ್ರವಲ್ಲದೆ, ಕಡಿಯಾಳಿಯಿಂದ ಲಕ್ಷ್ಮೀಂದ್ರ ನಗರದವರೆಗಿನ ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತರಾತುರಿಯಿಂದ ಹಾಗೂ ನಿರ್ಲಕ್ಷ್ಯ ತನದಿಂದ ಮನಸೋ ಇಚ್ಛೆಯಂತೆ ಅಗೆದು ಮಳೆಗಾಲದಲ್ಲಿ ಜನರು ಪರದಾಡುವಂತೆ ಮಾಡಿದ್ದಾರೆ.
ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ಎಚ್ಚೆತ್ತು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹ.