ಮೂಡುಬಿದಿರೆ ಡಿ 8: ಇಲ್ಲಿನ ಪುತ್ತಿಗೆ ಗ್ರಾಮದ ಕಾಯರ್ಪುಂಡು ಎಂಬಲ್ಲಿ ಮನೆಯ ಹಂಚು ತೆಗೆದು ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅಶ್ವತ್ಥಪುರ ಗುಂಡೆಬೆಟ್ಟು ನಿವಾಸಿ ಚೆಂಗು ಪೂಜಾರಿ ಅವರ ಮಗ ಅಶೋಕ್(42)ಎಂದು ತಿಳಿದುಬಂದಿದೆ. ಈತ ಸಂಪಿಗೆಯಲ್ಲಿ ರಿಕ್ಷಾ ಓಡಿಸುತ್ತಿದ್ದು ಇದರ ಮಧ್ಯೆ ಕಾಯರ್ಪುಂಡು ರತ್ನ ಎಂಬವರ ಮನೆ ಮತ್ತು ತೋಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ನವೆಂಬರ್ 25 ರಂದು ರತ್ನ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಂಚು ತೆಗೆದು ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಮೂಡುಬಿದಿರೆಯ ಸಹಕಾರಿ ಬ್ಯಾಂಕ್ ಒಂದರಲ್ಲಿ ಅಡವಿಟ್ಟಿದ್ದ ಎನ್ನಲಾಗಿದೆ. ಕಳ್ಳತನದ ಬಗ್ಗೆ ರತ್ನ ನೀಡಿದ ದೂರಿನನ್ವಯ ಅಪರಾಧ ವಿಭಾಗದ ಎಸ್.ಐ ಶಂಕರ್ ನಾಯರಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಡಿ 7 ರ ಗುರುವಾರ ಆರೋಪಿಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಇಲ್ಲಿನ ಕೋರ್ಟ್ಗೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.