ಮಂಗಳೂರು, ಜೂ 26 (Daijiworld News/MSP): ಮತ್ಸ್ಯ ಕ್ಷಾಮ ! ಈ ಭೂಮಿ ಮೇಲೆ ಹೇಗೆ ನೀರು , ಆಹಾರ, ಚಿನ್ನ, ಪೆಟ್ರೋಲು, ಬರ ತಲೆದೋರವಂತೆ ಸಮುದ್ರದೊಳಗಿನ ಮೀನಿನ ಕ್ಷಾಮ ಪ್ರಾರಂಭವಾಗಿದೆ ಎಂದರೆ ನಂಬಲೇಬೇಕು.
ಮೀನುಗಾರಿಕಾ ಋತು ಅಂತ್ಯಗೊಳ್ಳುವ ನಾಲ್ಕು ತಿಂಗಳ ಮೊದಲೇ ಮತ್ಸ್ಯಕ್ಷಾಮದಿಂದ ಮೀನುಗಾರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಪ್ರಸ್ತುತ ಮಳೆ ಕೊರತೆಯಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಇದರ ಪರಿಣಾಮ ಸೂಕ್ತ ಸಂಪಾದನೆಯೂ ಇಲ್ಲದೆ ಮೀನುಗಾರರು ಕಂಗಾಲಾಗಿದ್ದಾರೆ.
ಸಮುದ್ರದಲ್ಲಿ ಮೀನುಗಾರಿಕೆ ಇಳಿಯುವಾಗ ಕನಿಷ್ಠ 30 ಎಂ.ಎಂ. ಗಾತ್ರದ ಬಲೆಗಳನ್ನು ಬಳಕೆ ಮಾಡಬೇಕು ಎನ್ನುವ ಕಾನೂನಿದೆ. ಆದರೆ, ಈ ನಿಯಮವನ್ನು ಗಾಳಿಗೆ ತೂರಿ 16 ಎಂ.ಎಂ. ಬಲೆಗಳೊಂದಿಗೆ ಬುಲ್ ಟ್ರಾಲ್ ಮೀನುಗಾರಿಕೆಯ ಹಲವರು ಮೊರೆ ಹೋಗುತ್ತಿದ್ದಾರೆ. ನಿಷೇಧವಿದ್ದರೂ ರಾತ್ರಿ ವೇಳೆ ನಡೆಯುವ "ಬುಲ್ ಟ್ರಾಲ್ " ಮೀನುಗಾರಿಕೆ ಅತ್ಯಂತ ಅಪಾಯಕಾರಿ. ಯಾಕೆಂದರೆ ದೊಡ್ಡ ಗಾತ್ರದ ಮೀನುಗಳೊಂದಿಗೆ, ಮರಿಮೀನುಗಳನ್ನೂ ಇದು ಸೆರೆಹಿಡಿಯುತ್ತದೆ. ಹಾಗೆ ಸೆರೆಹಿಡಿದ ಮರಿಗಳನ್ನು ಒಣಗಿಸಿ, ಫಿಶ್ ಮಿಲ್ ಗೆ ಕೊಡುತ್ತಾರೆ. ಅದರ ಹುಡಿಯನ್ನೇ ಅಡಕೆ- ತೆಂಗಿನ ಮರದ ಬುಡಕ್ಕೆ ಗೊಬ್ಬರವನ್ನಾಗಿಸುತ್ತಾರೆ. ಈ ಹಿಂದೆ ಶೇ.7ರ ಪ್ರಮಾಣದಲ್ಲಿ ಸಣ್ಣ ಮೀನುಗಳು ಬಲೆಗೆ ಬೀಳುತ್ತಿದ್ದವು. ಆದರೆ, ಈಗ ಈ ಪ್ರಮಾಣ ಶೇ.30 ದಷ್ಟಿದೆ.
ಇನ್ನು ಕರಾವಳಿಯಲ್ಲಿ ಮತ್ಸ್ಯ ಸಂತತಿಯನ್ನು ರಕ್ಷಿಸಲೆಂದೇ ವರ್ಷದಲ್ಲಿ 60 ದಿನ, ಮೀನುಗಾರಿಕೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಇದರೊಂದಿಗೆ ಮುಂಗಾರು ವೈಪರಿತ್ಯಗಳನ್ನು ಆಧರಿಸಿ, ಹೆಚ್ಚು ಕಮ್ಮಿ ಜೂನ್ ನಿಂದ ಆಗಸ್ಟ್ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯುವುದಿಲ್ಲ ಇದು ಮೀನುಗಳ ಸಂತತಿಯನ್ನು ಮರು ಉತ್ಪಾದಿಸಲು ನೆರವಾಗುತ್ತದೆ.ಇದರೊಂದಿಗೆ ಗರ್ಭಿಣಿ ಮೀನುಗಳನ್ನು, ಮೀನಿನ ಮರಿಗಳನ್ನು ಹಿಡಿಯುವವರಿಗೆ ದಡದಲ್ಲಿಯೇ ದಂಡ ವಿಧಿಸಿದರೆ, ಮತ್ಸ್ಯ ಸಂತತಿಯನ್ನು ಸಂರಕ್ಷಿಸಬಹುದು. ಇಲ್ಲದಿದ್ದರೆ ಇನ್ನೇನು 10- 20 ವರ್ಷಗಳಲ್ಲಿ ಮೀನಿನ ಬರ ಆವರಿಸುವ ಅಪಾಯವಿದೆ.
ಇನ್ನು ಮತ್ಸ್ಯ ಕ್ಷಾಮದಿಂದ ಮೀನುಗಾರರು ಕೂಡಾ ರೈತರಂತೆ ಸಂಕಷ್ಟ ಅನುಭವಿಸುತ್ತಿದ್ದು, ರೈತರಂತೆ ನಮಗೂ ಕುಡಾ ಪ್ರೋತ್ಸಾಹ ಧನ ನೀಡುವ ಮೂಲಕ ಸರ್ಕಾರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸುತ್ತಾರೆ ಮೊಗವೀರಾ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸುಭಾಷ್ ಕುಂದರ್.