ಕಾಸರಗೋಡು, ಜೂ 25 (Daijiworld News/SM): ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ನಗದು, ವಾಹನ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ವಿರುದ್ಧ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡ ಅಲ್ತಾಫ್ ಮತ್ತು ಹಂಝ ನೀಡಿದ ದೂರಿನಂತೆ ಅಕ್ಷಯ್, ಗಣೇಶ್, ರಾಕೇಶ್, ಮಿಥುನ್, ಗಣೇಶ್ ಹಾಗೂ ಇನ್ನೋರ್ವ ನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇವರ ಪತ್ತೆಗೆ ಬದಿಯಡ್ಕ ಠಾಣೆಯ ಪೊಲೀಸರು, ವಿಟ್ಲ ಠಾಣಾ ಪೊಲೀಸರ ಸಹಕಾರದೊಂದಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ವಿಟ್ಲ ಬಳಿ ಜಾನುವಾರು ಸಹಿತ ಪತ್ತೆಯಾದ ಪಿಕಪ್ ವ್ಯಾನನ್ನು ಬದಿಯಡ್ಕ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೆರ್ಲ ಬಳಿಯ ಮಂಜನಡ್ಕದಿಂದ ತಂಡವು ಜಾನುವಾರು ಸಹಿತ ವಾಹನವನ್ನು ಅಪಹರಿಸಿ ಕೊಂಡೊಯ್ದಿದ್ದರು.
ಈ ಬೆಳವಣಿಗೆ ನಡುವೆ ಕಿಡಿಗೇಡಿಗಳು ಕಾಸರಗೋಡಿನಿಂದ ಪುತ್ತೂರಿಗೆ ತೆರಳುತ್ತಿದ್ದ ಎರಡು ಕೇರಳ ಕೆಎಸ್ ಆರ್ ಟಿ ಸಿ ಬಸ್ಸುಗಳಿಗೆ ಮಂಗಳವಾರ ಬೆಳಿಗ್ಗೆ ಕೆಲ್ಲೆಸೆದಿದ್ದಾರೆ. ಘಟನೆಯಲ್ಲಿ ಓರ್ವ ಚಾಲಕ ಗಾಯಗೊಂಡಿದ್ದಾರೆ. ಕಲ್ಲೆಸೆತದ ಹಿನ್ನಲೆಯಲ್ಲಿ ಕಾಸರಗೋಡಿನಿಂದ ವಿಟ್ಲ ದಾರಿಯಾಗಿ ಸಂಚರಿಸುವ ಕೆ ಎಸ್ ಆರ್ ಟಿ ಸಿ ಬಸ್ ಗಳು ಗಡಿಪ್ರದೇಶ ಅಡ್ಕಸ್ಥಳ ತನಕ ಸಂಚಾರ ನಡೆಸಿದವು.
ಘಟನೆ ಹಿನ್ನಲೆಯಲ್ಲಿ ಬದಿಯಡ್ಕ ಠಾಣಾ ಪೊಲೀಸರು ನಿಗಾ ವಹಿಸಿದ್ದರು.