ಬೈಂದೂರು, ಜೂ 25 (Daijiworld News/SM): ಗಂಗೊಳ್ಳಿ ಮೀನುಗಾರಿಕಾ ಬಂದರು ಮತ್ತು ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶಗಳಿಗೆ ಮಂಗಳವಾರ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಭೇಟಿ ನೀಡಿದರು. ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿದರು. ಆ ಕುರಿತು ಮೀನುಗಾರರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನಿರ್ಮಿಸಿರುವ ಜಟ್ಟಿಯ ಮುಂಭಾಗ ಅಲ್ಲಲ್ಲಿ ಕುಸಿದುಹೋಗಿದೆ. ಉಳಿದೆಡೆಯೂ ಕುಸಿಯುವ ಸಾಧ್ಯತೆ ಇದೆ. ಮೀನು ಮಾರಾಟದ ಕಟ್ಟಡದ ಕಂಬಗಳು ಬಿರುಕುಬಿಟ್ಟು ಕಟ್ಟಡ ಅಪಾಯದ ಸ್ಥಿತಿ ತಲಪಿವೆ. ಇನ್ನು ಎರಡು ತಿಂಗಳಿನಲ್ಲಿ ಮೀನುಗಾರಿಕಾ ಋತು ಆರಂಭವಾಗಲಿದ್ದು ಆಗ ಅತಂಕ ಸೃಷ್ಟಿಯಾಗಲಿದೆ ಎಂಬ ಮೀನುಗಾರರ ದೂರನ್ನು ಗಂಭೀರವಾಗಿ ಪರಿಗಣಿಸಿದರು.
ಸಂಸದರು ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರು. ಆ ಕುರಿತು ವಿವರಣೆ ನೀಡಿದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಎಸ್. ರಾಥೋಡ್ ಜಟ್ಟಿಯ ಮುಂಭಾಗವನ್ನು ಪುನರ್ನಿರ್ಮಿಸಲು ೧.೯೮ ಕೋಟಿ ರೂಪಾಯಿ ಮಂಜೂರಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಅದನ್ನು ನಿರ್ವಹಿಸಲು ಪರಿಣತ ಗುತ್ತಿಗೆದಾರರುಬೇಕು. ಮಳೆಗಾಲ ಮುಗಿದ ಬಳಿಕವಷ್ಟೆ ಕಾಮಗಾರಿ ಆರಂಭಿಸಲು ಸಾಧ್ಯ ಎಂದರು.
ತ್ರಾಸಿ ಮರವಂತೆ ನಡುವಿನ ಹೆದ್ದಾರಿ ರಕ್ಷಣೆಗೆ ಕಡಲ ತೀರದಲ್ಲಿ ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ ನೆರವಿನಿಂದ ನಿರ್ಮಾಣವಾಗುತ್ತಿರುವ ಸುಸ್ಥಿರ ಕಡಲ ತೀರ ಸಂರಕ್ಷಣಾ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು ದರ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿದರು. ಈ ಕಾಮಗಾರಿಯ ಕಾರಣದಿಂದ ಅದರ ದಕ್ಷಿಣದ ಭಾಗದಲ್ಲಿ ಕಡಲ್ಕೊರೆತ ಆಗುತ್ತಿದೆ. ಆದುದರಿಂದ ಆ ಭಾಗದಲ್ಲಿ ಅದೇ ರೀತಿಯ ಅಲೆತಡೆಗೋಡೆ ನಿರ್ಮಿಸಬೇಕು ಎಂದ ಅಲ್ಲಿನ ನಿವಾಸಿಗಳು ಒತ್ತಾಯಿಸಿದರು. ಆ ಬೇಡಿಕೆಯನ್ನು ಪರಿಗಣಿಸುವಂತೆ ಸಂಬಂಧಿಸಿದ ಅಧಿಕರಿಗೆ ಸಂಸದರು ಸೂಚನೆ ನೀಡಿದರು.