ಬೆಳ್ಮಣ್ ಡಿ 6 : ಆಯುರ್ವೇದ ಪದ್ದತಿ ಬಹಳ ಪುರಾತನವಾದ ಔಷಧ ಪದ್ದತಿಗಳಲ್ಲಿ ಒಂದಾಗಿದ್ದು ಇದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ರಾವ್ ಹೇಳಿದರು. ಆಳ್ವಾಸ್ ಆಯುರ್ವೇದ ಚಿಕಿತ್ಸಾ ಘಟಕ ಹಾಗೂ ಬೆಳ್ಮಣ್ ಜೇಸಿಐ ಇದರ ವತಿಯಿಂದ ಬೆಳ್ಮಣ್ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಡಿ 6 ರ ಗುರುವಾರ ಜರುಗಿದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಮತ್ತು ಆಳ್ವಾಸ್ ಸ್ವರ್ಣ ಸಂಜೀವಿನಿ ಸ್ವರ್ಣ ಬಿಂದು ಪ್ರಾಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪೂರ್ವ ವಲಯಾಧ್ಯಕ್ಷ ಸಂದೀಪ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಯುರ್ವೇದ ವೈದ್ಯಕೀಯ ಪದ್ದತಿ ಹಿಂದೆ ರಾಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ದುಷ್ಪರಿಣಾಮ ಇಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ ಜೇಸಿಐ ಅಧ್ಯಕ್ಷ ಪ್ರದೀಪ್ ಆಚಾರ್ಯ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬೆಳ್ಮಣ್ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ, ವಲಯಾಧಿಕಾರಿ ಸುಭಾಷ್ ಕುಮಾರ್, ಮತ್ತಿತರಿದ್ದರು.