ಮಂಗಳೂರು, ಜೂ25(Daijiworld News/SS): ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್'ನಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಬೆಟ್ಟಿಂಗ್ ನಡೆಯುತ್ತಿರುವ ಕುರಿತು ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 4 ಮಂದಿ ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 54 ಲಕ್ಷ ರೂಪಾಯಿ ನಗದು ಹಾಗು ಮೊಬೈಲ್ ಫೋನ್'ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಕರುಣಾಕರ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಹೊರಗಿನಿಂದ ನಡೆಸುತ್ತಿದ್ದಾನೆ ಎನ್ನಲಾಗಿದ್ದು, ತಲೆಮರೆಸಿಕೊಂಡಿರುವ ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಸಂದೀಪ ಪಾಟೀಲ ಅವರು ಬೆಟ್ಟಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಮಾಹಿತಿ ನೀಡುವಂತೆ ಕೋರಿದ್ದರು. ಸದ್ಯ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಚರಣೆ ಮುಂದುವರೆಸಿದ್ದಾರೆ.
ಪ್ರತಿ ಬಾರಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭದಲ್ಲಿ ಸದ್ದು ಮಾಡುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಇದೀಗ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳಿಗೂ ಚಾಚಿಕೊಂಡಿದೆ. ವಿಶ್ವಕಪ್ ಕ್ರಿಕೆಟ್ ಆರಂಭಗೊಂಡ ದಿನದಿಂದಲೂ ಜಿಲ್ಲಾದ್ಯಂತ ಕದ್ದುಮುಚ್ಚಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೂ, ಪತ್ತೆ ಹಚ್ಚುವುದು ಮಾತ್ರ ಜಿಲ್ಲೆಯ ಪೊಲೀಸರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿದೆ. ಯಾವುದೇ ಅಡೆತಡೆ ಇಲ್ಲದೇ ಬೆಟ್ಟಿಂಗ್ ಭರಾಟೆ ಜಿಲ್ಲಾದ್ಯಂತ ಹರಡಿಕೊಂಡಿದೆ.