ಬೆಳ್ತಂಗಡಿ: ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯ ರಕ್ಷಣೆ
Tue, Jun 25 2019 01:50:22 PM
ಬೆಳ್ತಂಗಡಿ, ಜೂ 25 (Daijiworld News/ss): ತಾಲೂಕಿನ ಕನ್ಯಾಡಿ ಗ್ರಾಮದ ನೇರಳಕಟ್ಟೆ ಎಂಬಲ್ಲಿನ ಪಾದೆ ನಿವಾಸಿ ಗಂಗಯ್ಯ ಗೌಡರಿಗೆ ಸೇರಿದ ಜಮೀನಿನಲ್ಲಿರುವ ಬಾವಿಗೆ ಚಿರತೆ ಬಿದ್ದ ಘಟನೆ ಜೂ.25ರ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮನೆ ಮಂದಿ ಬಾವಿ ಸಮೀಪ ತೆರಳಿದಾಗ ಚಿರತೆ ಬಾವಿಗೆ ಬಿದ್ದಿದ್ದು ಗಮನಕ್ಕೆ ಬಂದಿದೆ. ಆಹಾರ ಅರಸಿ ಬಂದಿರುವ ಚಿರತೆ ಸೋಮವಾರ ರಾತ್ರಿ ವೇಳೆ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಅರಣ್ಯಾ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಯಶಸ್ವಿಯಾಗಿ ಮೇಲೆತ್ತಿದ್ದಾರೆ. ಸೆರೆ ಸಿಕ್ಕ ಚಿರತೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ. ಚಿರತೆ ಬಾವಿಗೆ ಬಿದ್ದಿರುವುದನ್ನು ನೋಡಲು ಜನ ಸ್ಥಳದಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಸ್ಥಳೀಯರು ಹಾಗೂ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್, ಉಪ ವಲಯ ಅರಣ್ಯಾಧಿಕಾರಿ ರಾಜೇಶ್, ವಿನೋದ್ ಗೌಡ, ವನ್ಯ ಜೀವಿ ವಲಯ ಉ.ವ.ಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕರಾದ ಆನಂದ ಮೂರ್ತಿ, ರಾಘವೇಂದ್ರ, ಉಲ್ಲಾಸ್ ಭಾಗಿಗಳಾಗಿದ್ದರು.