ಬಂಟ್ವಾಳ, ಜೂ 25 (Daijiworld News/MSP): ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್ ಚಾಲಕ ಹಾಗೂ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ವಿಟ್ಲ ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಜೂ. 25 ರ ಮಂಗಳವಾರ ಬೆಳಗ್ಗೆ ನಡೆದಿದೆ.
ಮಂಗಳೂರು ಕಡೆಯಿಂದ ಮಾಣಿ ಮೂಲಕ ಪುತ್ತೂರು ಕಡೆಗೆ ತೆರಳುವ ಸೆಲಿನಾ ಹಾಗೂ ಸೇಪ್ವೇ ಸೇರಿದಂತೆ ಏಳು ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದ ವರದಿಯಾಗಿದೆ . ಘಟನೆಯಲ್ಲಿ ಬಸ್ ಗಳ ಗಾಜು ಸಂಪೂರ್ಣ ಧ್ವಂಸಗೊಂಡಿದೆ. ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿ ಅನೇಕ ಮಂದಿ ಪ್ರಯಾಣಿಸುತ್ತಿದ್ದು, ಕಿಟಕಿ ಗಾಜು ಹಾಗೂ ಕಲ್ಲಿನೇಟಿಗೆ ಮೂವರು ವಿದ್ಯಾರ್ಥಿಗಳಿಗೆ ತಲೆಭಾಗಕ್ಕೆ ಏಟಾಗಿದೆ.
ವಿಟ್ಲ ಠಾಣಾ ವ್ಯಾಪ್ತಿಯ ಸೂರಿಕುಮೇರ್, ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರೆಬೆಟ್ಟುನಲ್ಲಿ ಕಲ್ಲು ತೂರಾಟ ನಡೆದಿದ್ದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯವೆಸಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೋಮವಾರ ಕೇರಳ ಭಾಗದ ಅಡ್ಯನಡ್ಕದಲ್ಲಿ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಪ್ರಖಂಡದ ಭಜರಂಗ ದಳದ ಮುಖಂಡ ಅಕ್ಷಯ್ ರಜಪೂತ್ ಸೇರಿದಂತೆ ಹಲವು ಮಂದಿ ಮೇಲೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಮುಖಂಡರ ಮೇಲೆ ಪ್ರಕರಣ ದಾಖಲಾದ ಹಿನ್ನೆಯಲ್ಲಿ ವಿಟ್ಲ ಪ್ರಖಂಡದ ಪ್ರದೇಶಗಳಲ್ಲಿ ಬಂದ್ ಮಾಡಲಾಗುವುದು ಎಂದು ಹಿಂದೂಪರ ಸಂಘಟನಡಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಜೇಜ್ ಹರಿಯಬಿಟ್ಟಿದ್ದರು. ಇದರ ಮುಂದುವರಿದ ಭಾಗವಾಗಿ ಈ ಘಟನೆ ಸಂಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಟ್ಲ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.