ಮಂಗಳೂರು, ಡಿ 7: ಬಾರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಬಂದ ಮೇಯರ್ ಕವಿತಾ ಸನಿಲ್ ಬಾರ್ ಉದ್ಘಾಟಿಸದೆ ತೆರಳಿದ ಘಟನೆ ನಗರದ ಕುಂಟಿಕಾನದಲ್ಲಿ ನಡೆದಿದೆ. ಕವಿತಾ ಸನಿಲ್ ಅವರ ಅತ್ಮೀಯರೊಬ್ಬರು ಹೊಸದಾಗಿ ತೆರೆಯಲಿರುವ ಮದ್ಯದಂಗಡಿಗೆಯ ಡಿ 7 ರಂದು ಉದ್ಘಾಟಕರಾಗಿ ಆಹ್ವಾನಿಸಿದ್ದರು. ಆದರೆ ಉದ್ಘಾಟಕರಾಗಿ ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ಅಲ್ಲೇ ಸನಿಹದ ಸೈಂಟ್ ಆನ್ಸ್ ಹೈಸ್ಕೂಲ್ ಮಕ್ಕಳು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಕೆಲ ಕಾಲ ಗೊಂದಲಕ್ಕೆ ಒಳಗಾದ ಮೇಯರ್ ಕವಿತಾ ಸನಿಲ್ ಪ್ರತಿಭಟನಕಾರರನ್ನು ಮಾತಿಗೆಳೆದಾಗ, ಶಾಲೆಯ ಕಣ್ಣಳತೆ ದೂರದಲ್ಲಿ ಬಾರ್ ತೆರೆಯುವುದಕ್ಕೆ ನಮ್ಮ ವಿರೋಧ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಾರ್ ನ ಮಾಲೀಕ ನಾವು ಎಲ್ಲಾ ರೀತಿಯಲ್ಲೂ ಕಾನೂನು ಪಾಲನೆ ಮಾಡಿದ್ದೇವೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನವಿತ್ತರು. ಆದ್ರೆ ಮಕ್ಕಳ ವಿರೋಧವನ್ನು ಗಮನಿಸಿದ ಮೇಯರ್ ಗೊಂದಲಗಳು ಏನೇ ಇದ್ದರೂ ಬೇಗ ಪರಿಹರಿಸಿಕೊಳ್ಳಿ, ನಾನು ಈ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಬಾರ್ ಉದ್ಗಾಟನೆ ಮಾಡದೆ ತೆರಳುತ್ತಿದ್ದೇನೆ ಎಂದು ಮಾದ್ಯಮಗಳಿಗೆ ಉತ್ತರಿಸಿ ಬಾರ್ ಉದ್ಗಾಟಿಸದೆ ವಾಪಸ್ಸಾದರು.
ಬಾರ್ ಮಾಲೀಕರ ಪ್ರಕಾರ ಶಾಲೆಯಿಂದ ಮದ್ಯದಂಗಡಿ ಸುಮಾರು 120 ಕ್ಕೂ ಹೆಚ್ಚು ಮೀಟರ್ ದೂರದಲ್ಲಿದೆ. ಎಲ್ಲಾ ಕಾನೂನುಗಳನ್ನು ಪಾಲಿಸಿಯೇ ನಾವು ಬಾರ್ ತೆರೆದಿದ್ದೇವೆ. ಈ ಹಿಂದೆ ಇಲ್ಲದ ಆಕ್ಷೇಪ ಈಗೇಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ಶಾಲೆಯ ಪಿಟಿಎ ಸದಸ್ಯರಾದ ಜಾಸ್ಮೀನ್ ಡಿಸೋಜಾ ಪ್ರಕಾರ ಮದ್ಯದಂಗಡಿ ಮೊದಲನೆಯದಾಗಿ ಇದು ಕೇವಲ 80 ಮೀಟರ್ ದೂರದಲ್ಲಿದೆ.ಜತೆಗೆ ಇಲ್ಲಿ ಬಾರ್ ತೆರೆಯುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ , ಹೀಗಾಗಿ ನಾವು ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ನೀಡಲು ಸ್ವಲ್ಪ ತಡವಾಗಿದೆ ಎಂದು ಹೇಳಿದ್ದಾರೆ. ಈ ನಡುವೆ ಮೇಯರ್ ಅವರ ಅನುಪಸ್ಥಿತಿಯಲ್ಲಿಯೇ ಮದ್ಯದಂಗಡಿಗೆ ಚಾಲನೆ ದೊರಕಿತು.