ಕಾಸರಗೋಡು, ಜೂ 24 (Daijiworld News/SM): ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದ ತಂಡವೊಂದು ಚಾಲಕ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ 50 ಸಾವಿರ ರೂಪಾಯಿ ದೋಚಿ ಜಾನುವಾರು ಸಹಿತ ಪರಾರಿಯಾದ ಘಟನೆ ಜೂನ್ 24ರ ಸೋಮವಾರ ಮುಂಜಾನೆ ಎಣ್ಮಕಜೆ ಮಂಜನಡ್ಕ ಎಂಬಲ್ಲಿ ನಡೆದಿದೆ.
ಕೃತ್ಯದ ಹಿಂದೆ ಬಜರಂಗ ದಳದ ಕಾರ್ಯಕರ್ತರು ಇದ್ದಾರೆ ಎಂದು ಕಾಸರಗೋಡು ಚೆಂಗಳದ ಸರಕಾರಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳು ದೂರಿದ್ದಾರೆ. ಗಾಯಗೊಂಡವರನ್ನು ಪುತ್ತೂರು ಪರ್ಪಾಜೆಯ ಹಂಝ(30) ಮತ್ತು ಅಲ್ತಾಫ್(30) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಜಾನೆ 6.30ರ ಸುಮಾರಿಗೆ ಘಟನೆ ನಡೆದಿದೆ. ಪುತ್ತೂರು ಕೆದಿಲದಿಂದ ಮೂರು ಜಾನುವಾರು ಸಹಿತ ಪಿಕಪ್ ವಾಹನದಲ್ಲಿ ಬಂದ್ಯೋಡಿಗೆ ಕೊಂಡೊಯ್ಯುತ್ತಿದ್ದಾಗ ಕೃತ್ಯ ನಡೆದಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ .
ಪುತ್ತೂರಿನ ಇಸ್ಮಾಯಿಲ್ ಎಂಬವರು ಜಾನುವಾರುಗಳನ್ನು ಬಂದ್ಯೋಡಿಗೆ ತಲಪಿಸಲು ತಿಳಿಸಿದ್ದರು. ಎಣ್ಮಕಜೆ ಮಂಜನಡ್ಕದಲ್ಲಿ ಜಾನುವಾರು ಸಾಕಾಣಿಕೆ ಕೇಂದ್ರ ನಡೆಸುತ್ತಿರುವ ಹ್ಯಾರಿಸ್ ರ ಮನೆಗೆ ತಲುಪಿಸಲು 50 ಸಾವಿರ ರೂಪಾಯಿ ನಗದನ್ನು ಕೂಡ ನೀಡಿದ್ದರು. ಈ ಹಣ ನೀಡಲು ಹ್ಯಾರಿಸ್ ನ ಮನೆಗೆ ತಲುಪಿದಾಗ ಕಾರಿನಲ್ಲಿ ಬಂದ ಏಳು ಮಂದಿಯ ತಂಡವು ಬೆದರಿಸಿ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿ ನಗದು, ಜಾನುವಾರು ಸಹಿತ ಕೊಂಡೊಯ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬದಿಯಡ್ಕ ಠಾಣಾ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.