ಬೆಳ್ತಂಗಡಿ, ಜೂ 24 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯುಳ್ಳ ಗಡಾಯಿಕಲ್ಲು ಎಂದೇ ಪ್ರಸಿದ್ದ ಪಡೆದ ನರಸಿಂಹಗಢ ಅಥವಾ ಜಮಾಲಾಬಾದ್ ಬಿರುಕುಬಿಟ್ಟು ಕುಸಿಯುತ್ತಿದೆಯಾ ? ಈ ಆತಂಕ ಸ್ಥಳೀಯ ಜನರನ್ನು ಕಾಡತೊಡಗಿದೆ. ಯಾಕೆಂದರೆ ಜೂ.24 ರ ಸೋಮವಾರ ಮುಂಜಾನೆ 6.45 ರ ವೇಳೆಗೆ ಕಲ್ಲಿನ ಒಂದು ಬದಿ ಬಿರುಕುಬಿಟ್ಟು ಸುತ್ತಲೂ ಧೂಳು ಆವರಿಸಿತ್ತು. ಇದು ಎಲ್ಲರ ಆತಂಕಕ್ಕೆ ಕಾರಣವಾಗಿದ್ದು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಳ್ತಂಗಡಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ಗಡಾಯಿಕಲ್ಲು ಸಮುದ್ರಮಟ್ಟದಿಂದ 1700 ಅಡಿ ಎತ್ತರದಲ್ಲಿದೆ. ಈ ಬೃಹತ್ ಕಲ್ಲಿಗೆ ಸಿಡಿಲು ಅಪ್ಪಳಿಸಿ ಕಲ್ಲಿನ ಭಾಗಗಳು ಕೆಳಗೆ ಬೀಳುವುದು ಸ್ಥಳೀಯರಿಗೆ ಸಾಮಾನ್ಯ ವಿಚಾರವಾಗಿದೆ. ಆದರೆ ಸ್ಥಳೀಯರ ಹೇಳುವಂತೆ, ಅಂತಹ ಯಾವುದೇ ಬೆಳವಣಿಗೆಗಳು ನಡೆಯದೇ ಗಡಾಯಿಕಲ್ಲಿನ ಪರಿಸರದಲ್ಲಿ ಭಾರೀ ಶಬ್ದವೂ ಕೇಳಿಸಿ ಒಂದು ಪಾಶ್ವದಿಂದ ಪುಡಿಪುಡಿಯಾಗಿ ಕಲ್ಲುಗಳು ಕುಸಿಯತೊಡಗಿದ್ದು ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ.
ಕುಸಿತಗೊಂಡ ಗಡಾಯಿಕಲ್ಲಿನ ಪಾಶ್ವದ ಊರಿನ ಬಳಿ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಪರಿಶೀಲಿಸಿದ್ದಾರೆ. ಬೆಳ್ತಂಗಡಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವ ಗಡಾಯಿಕಲ್ಲಿನ ಬಿರುಕಿನ ಬಗ್ಗೆ ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಇದೊಂದು ಪ್ರಾಕೃತಿಕ ಸಹಜ ಬೆಳವಣಿಗೆಯಾಗಿದ್ದು ಈ ಪರ್ವತಕ್ಕೆ ಯಾವುದೇ ಹಾನಿಯಾಗಿಲ್ಲ. ಕುಸಿತದಿಂದ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಚಾರಣ ಪ್ರೀಯರ ನೆಚ್ಚಿನ ತಾಣವಾಗಿರುವ ಗಡಾಯಿಕಲ್ಲು ಬೆಳ್ತಂಗಡಿಯಿಂದ ಲೈಲಾ-ಕಿಲ್ಲೂರು ರಸ್ತೆಯಲ್ಲಿ ಸಾಗಿದರೆ ಸಿಗುತ್ತದೆ. ಇದನ್ನು ನರಸಿಂಹಗಢ ಎಂದು ಕರೆಯಲಾಗುತ್ತದೆ. ಬಂಗಾಡಿ ಅರಸ ನರಸಿಂಹ ಕಟ್ಟಿಸಿದ ಕೋಟೆ ನರಸಿಂಹಗಢವೆಂದು ಪ್ರಸಿದ್ಧವಾಯಿತು. 1794ರಲ್ಲಿ ಟಿಪ್ಪು ಸುಲ್ತಾನ್ ಆ ಕೋಟೆಯನ್ನು ಆಕ್ರಮಿಸಿಕೊಂಡು ಅಲ್ಲಿನ ಗ್ರಾನೈಟ್ ಕಲ್ಲಿನಿಂದ ಪ್ರಭಾವಿತನಾಗಿ ಹಳೆಯ ಕೋಟೆಯನ್ನು ಕೆಡವಿ ಹೊಸ ಕೋಟೆಯನ್ನು ನಿರ್ಮಿಸಿ ಅದಕ್ಕೆ ತನ್ನ ತಾಯಿ ಜಮಾಲಾಬಿಯ ಹೆಸರನ್ನು ಇಡಲಾಯಿತು. ಹಾಗಾಗಿ ಈ ಕೋಟೆ ಜಮಾಲಾಬಾದ್ ಕೋಟೆಯಾಯಿತು. ಇಲ್ಲಿ ಪಾಶಿ ಗುಂಡಿ(ಟಿಪ್ಪು ಡ್ರಾಪ್)ಗೆ ಅಪರಾಧಿಗಳನ್ನು ತಳ್ಳಿ ಕೊಲ್ಲಲಾಗುತಿತ್ತು ಮತ್ತು ಕೋಟೆಯ ಕೊಠಡಿಗಳಲ್ಲಿ ಮೌಲ್ಯಯುತ ವಸ್ತುಗಳನ್ನು ಇರಿಸಲಾಗುತ್ತಿತ್ತು. ಇಲ್ಲೇ ಪಹರೆಯವರಿಗಾಗಿ ಕೊಠಡಿ, ಕೆರೆ, ಫಿರಂಗಿ, ಕಾವಲು ತಾಣಗಳನ್ನು ನಿರ್ಮಿಸಲಾಗಿತ್ತು.