Karavali
ಕಾರ್ಕಳ: ಉದ್ಘಾಟನೆಗೂ ಮುನ್ನವೇ ಸೋರುತ್ತಿರುವ ತಾಲೂಕು ಸರಕಾರಿ ಆಸ್ಪತ್ರೆ!
- Mon, Jun 24 2019 10:11:44 AM
-
ಕಾರ್ಕಳ, ಜೂ 24 (Daijiworld News/MSP): ರಾಜ್ಯ ಸರಕಾರದ ರೂ. 6 ಕೋಟಿ ಅನುದಾನದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಎದುರುನೋಡುತ್ತಿರುವ ತಾಲೂಕು ಸರಕಾರಿ ಆಸ್ಪತ್ರೆಯ ಮೇಲ್ಚಾವಣೆ ಸಂಪೂರ್ಣ ಬಿರುಕು ಬಿಟ್ಟು ಮಳೆ ನೀರು ಸೋರಿಕೆಯಾಗುತ್ತಿದೆ. ದಾಯ್ಜಿವಲ್ಡ್ ರಿಯಾಲಿಟಿ ಚೆಕ್ ನಡೆಸಿದಾಗ ಮೇಲಿನ ಅಂಶ ಬೆಳಕಿಗೆ ಬಂದಿದೆ.
ಜೂನ್ 21ರಂದು ಭೇಟಿ ನೀಡಿದಾಗ ಆಸ್ಪತ್ರೆಯ ಮೇಲ್ಛಾವಣೆಯ ದುರಸ್ಥಿ ಕಾಣಿಸಿಕೊಂಡಿದ್ದು, ಗಮ್ ಮಿಶ್ರಿತ ಸಿಮೆಂಟ್ಗಾರೆ ಹಾಕುವುದರಿಂದ ನೀರು ಸೋರಿಕೆ ತಡೆಗಟ್ಟಬಹುದು ಎನ್ನುತ್ತಿದ್ದಾರೆ.
ಈ ಕುರಿತು ಕಾರ್ಮಿಕ ವರ್ಗದವರನ್ನು ಮಾತಿಗೆಳೆದಾಗ ಕೆಲವೊಂದು ಭಾಗಗಳಲ್ಲಿ ಸಮಸ್ಯೆ ಕಾಮಗಾರಿ ನಡೆಯುತ್ತಿತ್ತು. ಮಳೆ ನೀರು ಸೋರಿಕೆಗೆ ಕಾರಣವಾಗಿರುವ ಕೆಲ ಭಾಗಗಳಲ್ಲಿ ಹಾಕಲಾಗಿರುವ ಕಾಂಕ್ರೀಟ್ನ್ನು ಕೆತ್ತಿ ತೆಗೆಯಲಾಗುತ್ತಿದೆ. ಆ ಭಾಗಕ್ಕೆ ಗಮ್ಮಿಶ್ರಣ ಸಿಮೆಂಟ್ ಗಾರೆ ಹಾಕುವ ಮೂಲಕ ನಡೆದಿರುವ ಕಾಮಗಾರಿ ಗುಣಮಟ್ಟವನ್ನು ಹೊರ ಪ್ರಪಂಚಕ್ಕೆ ಬರದಂತೆ ಪ್ರಯತ್ನ ನಡೆಸಲಾಗುತ್ತಿದೆ.
ನೂತನ ಕಟ್ಟಡದಲ್ಲಿ ದೊರಕುವ ಸೌಲಭ್ಯ
ತಳ ಹಂತಸ್ತು ಹಾಗೂ ಮೊದಲ ಅಂತಸ್ತು ಒಳಗೊಂಡಿರುವ ನೂತನ ಕಟ್ಟಡವು 3294.30 ಚದರ ಮೀಟರ್ ಹೊಂದಿದೆ. ತಳ ಅಂತಸ್ತಿನಲ್ಲಿ ಹೆಸರು ನೊಂದಾವಣಾ ವಿಭಾಗ, ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಜೌಷಧಾಲಯ, ಸಣ್ಣ ಶಸ್ತ್ರ ಚಿಕಿತ್ಸಾ ವಿಭಾಗ, ಮಕ್ಕಳ ಮತ್ತು ಸ್ತ್ರೀ ರೋಗ ವಿಭಾಗ, ಕ್ಷ-ಕಿರಣ ವಿಭಾಗ, ಅಲ್ಟ್ರೋ ಸೌಂಡ್ಸ್ ವಿಭಾಗ, ಅಟೋ ಕ್ಲೆವ್, ಪ್ರಯೋಗಾಲಯ, ವಿದ್ಯುತ್ ವಿಭಾಗ, ದಾದಿಯರ ಕೋಣೆ, ಸಿಬ್ಬಂದಿಗಳ ಕೋಣೆ, 32 ಹಾಸಿಗೆಮಂಚಯುಳ್ಳ ಸಾಮಾನ್ಯ ವಿಭಾಗ, ವಿಶೇಷ ವಿಭಾಗ, ತೀವ್ರ ನಿಗಾ ವಿಭಾಗದ ವ್ಯವಸ್ಥೆ ಒಳಗೊಂಡಿರುತ್ತದೆ.
ಮೊದಲ ಅಂತಸ್ತಿನಲ್ಲಿ ಹೊರ ರೋಗಿಗಳ ತಪಾಸಣಾ ವಿಭಾಗ, ಸಣ್ಣ ಶಸ್ತ್ರ ಚಿಕಿತ್ಸೆ ವಿಭಾಗ, ಪ್ರಧಾನ ಕಚೇರಿ, ದಾಖಲೆ ವಿಭಾಗ, ಸಭಾಂಗಣ, 32 ಹಾಸಿಗೆಯುಳ್ಳ ಸಾಮಾನ್ಯ ವಿಭಾಗ, 5 ಹಾಸಿಗೆಯುಳ್ಳ ವಿಶೇಷ ವಿಭಾಗ, ದೊಡ್ಡ ಶಸ್ತ್ರ ಚಿಕತ್ಸೆ ವಿಭಾಗದ ವ್ಯವಸ್ಥೆಗಳು ಒಳಗೊಂಡಿರುತ್ತದೆ.ಪಶ್ಚಿಮ ಘಟ್ಟ, ಅವಿಭಜಿತ ದಕ್ಷಿಣ ಕನ್ನಡಕ್ಕೂ ಆಸರೆ
ಕಳಸ,ಬಾಳೆಹೊನ್ನೂರು, ಎನ್ಆರ್ಪುರ, ಕುದುರೆಮುಖ, ಬೆಳ್ತಂಗಡಿ, ನಾರಾವಿ, ಮೂಡಬಿದ್ರಿ, ಕಾಪು ಸಹಿತ ನಾನಾ ಕಡೆಗಳಿಂದ ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಿರುವ ರೋಗಿಗಳು ಗಣನೀಯ ಸಂಖ್ಯೆಯಲ್ಲಿ ಕಂಡುಬರುತ್ತಾರೆ.
ಮಾಸಿಕವೊಂದಕ್ಕೆ ಸರಾಸರಿಯಾಗಿ 475 ಮಂದಿಯರು ಒಳರೋಗಿಗಳು, 7500 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದು ದಾಖಲೆಗಳ ಮೂಲಕ ತಿಳಿದುಬರುತ್ತಿದೆ.
ನೂತನ ಕಟ್ಟಡದಲ್ಲಿ ಆಸ್ಪತ್ರೆ ವಿಭಾಗದ ಸಂಪೂರ್ಣ ಕಾರ್ಯಗತಗೊಂಡಲ್ಲಿ ಹೆಚ್ಚಿನ ರೋಗಿಗಳಿಗೆ ಅದರ ಪ್ರಯೋಜನವು ದೊರಕಲಿದೆ.
ಯೋಜನೆಯ ಪೂರ್ಣ ಮಾಹಿತಿ
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿಯಲ್ಲಿ ನೂತನ ಕಟ್ಟಡ ಕಾಮಗಾರಿಯನ್ನು ನಡೆಸುತ್ತಿದೆ. ರೂ. 6 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿರುವ ಕಾಮಗಾರಿಯನ್ನು ಬೆಂಗಳೂರು ಕುಮಾರ ಪಾರ್ಕ್ ವೆಸ್ಟ್ನ ಸಿಆರ್ಸಿಂಗ್ ಬಿಲ್ಡಿಂಗ್ನಲ್ಲಿ ವ್ಯವಹಾರ ನಡೆಸುತ್ತಿರುವ ಸ್ಟಾರ್ ಬಿಲ್ಡರ್ ಎಂಡ್ ಡೆವಲರ್ಸ್ ಗುತ್ತಿಗೆಯನ್ನು ಪಡೆದಿದೆ.
ರೂ. 6,44,02,810.23 ಗುತ್ತಿಗೆಯ ಮೊತ್ತ ವಾಗಿದೆ. 2016 ನವಂಬರ್ 25ರಂದು ಕಾಮಗಾರಿ ಆರಂಭಗೊಂಡು 2018 ಫೆಬ್ರವರಿ 24ರಂದು ಕಾಮಗಾರಿ ಮುಕ್ತಾಯಗೊಳ್ಳಬೇಕಾಗಿದೆ.
ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಕೆ.ಹೆಚ್.ಎಸ್.ಡಿ.ಆರ್.ಪಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಮೈಸೂರು ಜನರಾಬಾದ್ ಎಸ್ಪಿಸಿ ಆಸ್ಪತ್ರೆಯ ಆವರಣದಲ್ಲಿ ಇರುವ ಕೆ.ಹೆಚ್.ಎಸ್.ಡಿ.ಆರ್.ಪಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಕಾಮಗಾರಿ ನಿರ್ವಹಿರುವುದು ಗಮನಾರ್ಹವಾಗಿದೆ.ನಿರ್ಲಕ್ಷ್ಯತನದ ಪರಮಾವಧಿ!
ಸಾರ್ವಜನಿಕ ಉದ್ಯಮಿಗಳ ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಒಎನ್ಜಿಸಿ ಕಂಪೆನಿ ಸಹಯೋಗದಲ್ಲಿ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿಯವರ ಮುತುವರ್ಜಿಯೊಂದಿಗೆ ಹೆರಿಗೆ ವಿಭಾಗಕ್ಕೆಂದು ನಿರ್ಮಾಣ ಗೊಂಡಿರುವ ಕಟ್ಟಡ ವರ್ಷ ಕಳೆಯುತ್ತಿದ್ದಂತೆ ಮೇಲ್ಚಾವಣೆ ಸೋರಿಕೆಯಾಗ ತೊಡಗಿತು.
ರೂ. 98.10 ಲಕ್ಷ ಅನುದಾನದಲ್ಲಿ ಕಾಮಗಾರಿಯು ಮಂದಗತಿಯಲ್ಲಿ ಸಾಗಿ ಅಂದಿನ ಜಿಲ್ಲಾಧಿಕಾರಿ ವಿಶಾಲ್ರವರ ನಿರ್ದೇಶನದಂತೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿತ್ತಾದರೂ ಅದರ ಉದ್ಘಾಟನೆಗೆ ಇನ್ನೂ ನಡೆಯಲಿಲ್ಲ. ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೊರರೋಗಿ ವಿಭಾಗ, ಅಧೀಕ್ಷಕರ ಕಚೇರಿ, ರೋಗಿಗಳ ತಪಾಸಣಾ ಕೇಂದ್ರ, ಔಷಧಾಲಯ ವಿಭಾಗ ಇವೆಲ್ಲವನ್ನು ಇದೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ನಿರ್ಮಿತಿ ಕೇಂದ್ರವು ಕಟ್ಟಡದ ಕಾಮಗಾರಿ ನಡೆಸಿದೆ. ಜಿಲ್ಲಾಧಿಕಾರಿಯೇ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುವ ಕಾರಣದಿಂದಲೇ ಕಾಮಗಾರಿ ಗುಣಮಟ್ಟದ ಬಗ್ಗೆ ಪ್ರಶ್ನಿಸುವುದಕ್ಕೆ ಯಾವುದೇ ಅಧಿಕಾರಿಗಳು ಧೈರ್ಯ ತೋರಿರಲಿಲ್ಲ.ಅಲ್ಪ ಮಳೆಗೆ ಹೀಗಾದರೆ?
ಪ್ರಸಕ್ತ ಸಾಲಿನಲ್ಲಿ ಮಳೆಗಾಲ ಆರಂಭಗೊಂಡು ತಿಂಗಳು ಕಳೆದರೂ ಸುರಿಯಬೇಕಾಗಿದ್ದ ಮಳೆಯು ಬರಲಿಲ್ಲ. ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಗೆ ಕಾಮಗಾರಿಯ ಗುಣಮಟ್ಟದ ಲೋಪದಿಂದಾಗಿ ಮಳೆ ನೀರು ಸೋರಿಕೆಯಾಗುತ್ತದೆ ಕಂಡುಬಂದಿದೆ. ಭಾರೀ ಮಳೆ ಬಿದ್ದರೆ ನೂತನ ಕಟ್ಟಡದ ಸ್ಥಿತಿಗತಿ ಊಹಿಸಿಕೊಳ್ಳುವುದಕ್ಕೂ ಕಷ್ಟಕರವಾಗಬಹುದು.
ಪ್ರಸ್ತುತ ದಿನದಲ್ಲಿ ಗಮ್ಬಳಸಿ ತೇಪೆ ಕಾಮಗಾರಿಯಿಂದ ಸೋರಿಕೆ ತಡೆಗಟ್ಟಬಹುದಾದರೂ, ಮುಂದಿನ ದಿನಗಳಲ್ಲಿ ಎದುರಾಗುವ ಬೇಸಿಗೆ ತಾಪ ಹಾಗೂ ನಂತರ ಎದುರಾಗುವ ಮಳೆಯಿಂದಾಗಿ ಸಮಸ್ಸೆ ಇನ್ನಷ್ಟು ಜಟಿಲಗೊಳ್ಳುವ ಸಾಧ್ಯಯನ್ನು ತಳ್ಳಿಹಾಕುವಂತಿಲ್ಲ.ಸೋರಿಕೆಯ ಕುರಿತು ಇಲಾಖೆಯ ಗಮನ ತರುತ್ತೇನೆ
ನೂತನ ಕಟ್ಟಡ ಸ್ಥಿತಿಗತಿಯ ಕುರಿತು ಇಲಾಖೆಯ ಗಮನಕ್ಕೆ ತರುತ್ತೇನೆ. ಇಲಾಖಾಧಿಕಾರಿಗಳ ನಿರ್ದೇಶನಂತೆ ಮುಂದಿನ ಕ್ರಮ ಜರಗಲಿದೆ. -ಡಾ.ಪಿ.ಕೆ.ಮಲ್ಯ ಪ್ರಭಾರ ಆಡಳಿತ ವೈದ್ಯಾಧಿಕಾರಿ ತಾಲೂಕು ಸರಕಾರಿ ಆಸ್ಪತ್ರೆ