ಮಂಗಳೂರು, ಜೂ23(Daijiworld News/SS): ಗುರುಪುರದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸೇತುವೆ ಕಾಮಗಾರಿ ನಿಗದಿತ ಅವಧಿಗಿಂತ ಮೊದಲೇ ಮುಗಿಯಲಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು - ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ 2021ರ ಫೆಬ್ರವರಿ 20ರಂದು ಪೂರ್ಣಗೊಳಿಸುವ ಕರಾರಿನ ಮೇರೆಗೆ ಕಾವೂರಿನ ಮೊಗರೋಡಿ ಕನ್ಸ್ಟ್ರಕ್ಷ ನ್ ಕಂಪನಿಗೆ ಗುತ್ತಿಗೆ ಒಪ್ಪಿಸಲಾಗಿತ್ತು. ಟೆಂಡರ್ ಪಡೆದ ತಕ್ಷಣ ಕಾಮಗಾರಿ ಆರಂಭಿಸಿರುವ ಕಂಪನಿ, ಬೇಸಗೆಯಲ್ಲಿ ಕ್ಷಿಪ್ರಗತಿಯಲ್ಲಿ ಪಿಲ್ಲರ್ ಹಾಕುವ ಕೆಲಸ ಮುಗಿಸಿದೆ ಎಂದು ಹೇಳಿದರು.
ಮಳೆಗಾಲದಲ್ಲಿ ಗರ್ಡರ್ ಮತ್ತು ಸ್ಪ್ಯಾಬ್ ಅಳವಡಿಕೆ ಕೆಲಸ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತಿ ಶೀಘ್ರ ಮುಕ್ತಾಯಗೊಳ್ಳಲಿರುವ ಕಾಮಗಾರಿ ಇದೆಂಬ ಹೆಗ್ಗಳಿಕೆಗೆ ಗುರುಪುರ ಸೇತವೆ ಪಾತ್ರವಾಗಲಿದೆ ಎಂದು ಹೇಳಿದರು.
ಈಗಾಗಲೇ ಮಂಗಳೂರು ಬೈಪಾಸ್ ರಸ್ತೆಗೆ ಸರಕಾರ ಒಪ್ಪಿಗೆ ನೀಡಿದೆ. ಮೂಲ್ಕಿ, ಕಿನ್ನಿಗೋಳಿ, ಕಟೀಲು, ಬಜ್ಪೆ, ಗುರುಪುರ ಕೈಕಂಬ, ಪೊಳಲಿ, ಬಿ.ಸಿ.ರೋಡ್, ಮೇಲ್ಕಾರು, ಮುಡಿಪು, ಕೊಣಾಜೆ ಮೂಲಕ ತಲಪಾಡಿ ಸಂಪರ್ಕಿಸಲಿದೆ. 'ಭಾರತ್ ಮಾಲಾ' ಯೋಜನೆಯಡಿ ಬೈಪಾಸ್ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ, ಮೂಲರಪಟ್ಣದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಹಾಗೂ ತಾನು ಸರಕಾರಕ್ಕೆ ಒತ್ತಡ ಹೇರಿದ್ದು, ಹೊಸ ಸೇತುವೆ ಮುಂದಿನ ವರ್ಷ ಆರಂಭಗೊಳ್ಳಲಿದೆ. ಸ್ಟೀಲ್ ಬಳಕೆಯ ಹೊಸ ತಂತ್ರಜ್ಞಾನದೊಂದಿಗೆ ಹೊಸ ಸೇತುವೆ ನಿರ್ಮಾಣಗೊಳ್ಳಲಿದ್ದು, ಇದು ಕಡಿಮೆ ವೆಚ್ಚದಲ್ಲಿ ಶೀಘ್ರ ಕಾರ್ಯಗತಗೊಳ್ಳಲಿದೆ ಎಂದು ಹೇಳಿದ್ದಾರೆ.