ಮಂಗಳೂರು, ಜೂ23(Daijiworld News/SS): ಎತ್ತಿನಹೊಳೆ ಯೋಜನೆಗೆ ಕರಾವಳಿ ಪ್ರದೇಶದಲ್ಲಿ ವ್ಯಾಪಕ ವಿರೋಧ ಕೇಳಿಬಂದಿದ್ದರೂ, ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಈ ಯೋಜನೆಯು ಸ್ಥಗಿತವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ರಾಜ್ಯ ಸರ್ಕಾರ ಕರಾವಳಿ ಜನರ ವಿರೋಧದ ನಡುವೆಯೂ ನಡೆಸುತ್ತಿರುವ ಬಹುದೊಡ್ಡ ಎತ್ತಿನಹೊಳೆ (ನೇತ್ರಾವತಿ ನದಿ ತಿರುವು) ಯೋಜನೆಯನ್ನು ತಡಯಬೇಕು ಎಂದು ಮಾಜಿ ಶಾಸಕ, ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿಯ ವಿಜಯಕುಮಾರ ಶೆಟ್ಟಿ ಮತ್ತೊಮ್ಮೆ ಆಗ್ರಹಿಸಿದ್ದಾರೆ.
ಭವಿಷ್ಯದಲ್ಲಿ ನೀರಿನ ಬರ ಎದುರಾಗದಂತೆ ಎತ್ತಿನಹೊಳೆ ಯೋಜನೆಯನ್ನು ತಡೆಯಬೇಕಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮಾರ್ಚ್ ಏಪ್ರಿಲ್ ತಿಂಗಳಲ್ಲೇ ನೀರಿನ ಸಮಸ್ಯೆ ಎದುರಾಗಿತ್ತು. ಜೂನ್ ತಿಂಗಳು ಪ್ರಾರಂಭವಾದರೂ ಈ ಪ್ರದೇಶಗಳಲ್ಲಿ ಮಳೆಯಾಗಿರಲಿಲ್ಲ. ನೀರಿನ ಸಮಸ್ಯೆ ಬಹಳವಾಗಿ ಕಾಡಿತು. ಇಲ್ಲಿನ ಅನೇಕ ಕೈಗಾರಿಕಾ ಕೇಂದ್ರಗಳು ತನ್ನ ಉತ್ಪಾದನೆಯನ್ನು ನಿಲ್ಲಿಸಿದ್ದವು. ಇಲ್ಲಿನ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರಗಳಲ್ಲಿಯೂ ನೀರಿಲ್ಲದೆ ಭಕ್ತಾದಿಗಳು ತೊಂದರೆ ಅನುಭವಿಸಿದ್ದರು ಎಂದು ಹೇಳಿದ್ದಾರೆ.
ಕರಾವಳಿ ಪ್ರದೇಶದ ಜನರಿಗೆ ಈ ವರ್ಷ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ನೇತ್ರಾವತಿ ನದಿಯನ್ನೇ ಕೋಲಾರ ಚಿಕ್ಕಬಳ್ಳಾಪುರ ಪ್ರದೇಶಕ್ಕೆ ತಿರುಗಿಸುವ ಕೆಲಸ ಭರದಿಂದ ಸಾಗುತ್ತಿದೆ. ದೇಶದ ಉನ್ನತ ಮಟ್ಟದ ತಜ್ಞರ ಅಭಿಪ್ರಾಯದ ಪ್ರಕಾರ ಎತ್ತಿನಹೊಳೆ ಯೋಜನೆ ಸಂಪೂರ್ಣವಾಗಿ ಅವೈಜ್ಞಾನಿಕ ಯೋಜನೆಯಾಗಿದೆ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗೆ ಸುಮಾರು 13 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಯೋಜನೆ ಸಂಪೂರ್ಣಗೊಳ್ಳುವಾಗ ಇದು 25 ಸಾವಿರ ಕೋಟಿ ರೂ. ಮೀರಲೂಬಹುದು. ಈ ಯೋಜನೆ ಸಾಕಾರಗೊಂಡರೆ ಇನ್ನಷ್ಟು ಅನಾಹುತಗಳು ಸಂಭವಿಸಲಿದೆ. ಮಾತ್ರವಲ್ಲ, ಕರಾವಳಿ ಪ್ರದೇಶದ ಜನರು ಬಹಳಷ್ಟು ಸಂಕಷ್ಟಗಳನ್ನು ಎದುರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯೋಜನೆ ಸ್ಥಗಿತಗೊಳ್ಳದಿದ್ದರೆ ಕರಾವಳಿಯ ಮತ್ಸ್ಯ ಸಂಪತ್ತು ನಾಶವಾಗಿ ಮೀನುಗಾರರು ತೊಂದರೆ ಅನುಭವಿಸಲಿದ್ದಾರೆ. ಇಲ್ಲಿನ ಕೃಷಿಕರು ಬೀದಿಪಾಲಾಗಲಿದ್ದಾರೆ. ಇಲ್ಲಿನ ಜನ ಕುಡಿಯುವ ನೀರಿಗಾಗಿ ಪರದಾಡಲಿದ್ದಾರೆ. ಇನ್ನಾದರೂ ಸರಕಾರ ಈ ಯೋಜನೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನಾವೆಲ್ಲರೂ ಪಶ್ಚಾತಾಪ ಪಡಬೇಕಾದೀತು ಎಂದು ಮನವಿ ಮಾಡಿದ್ದಾರೆ.
ಎತ್ತಿನಹೊಳೆ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಮಂಗಳೂರಿನ ಜನರ ನೋವನ್ನು ಕೇಳುವ ಗೋಜಿಗೆ ಹೋಗುತ್ತಿಲ್ಲ. ಆತುರದಲ್ಲಿ ಎತ್ತಿನಹೊಳೆ ಯೋಜನೆ ಮಾಡುವುದು ಬೇಡ, ಇದನ್ನು ಸ್ಥಗಿತಗೊಳಿಸಿ ಎಂದು ಈಗಾಗಲೇ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ.