ಮಂಗಳೂರು, ಜೂ23(Daijiworld News/SS): ಗೋಶಾಲೆಯಿಂದ ಗೋವುಗಳನ್ನು ಬಿಡಿಸಿಕೊಂಡು ಹೋಗಿ, ಬಳಿಕ ಜನರನ್ನು ಸೇರಿಸಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ನಗರ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.
ನಗರದ ಹೊರ ವಲಯದ ಜೋಕಟ್ಟೆಯಲ್ಲಿ ಜೂ.4ರಂದು ಸುಮಾರು 23 ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೂಡಿ ಹಾಕಿದ್ದನ್ನು ಪಣಂಬೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದರು. ಈ ಪ್ರಕರಣದಲ್ಲಿ ಪಣಂಬೂರು ಠಾಣೆ ಪೊಲೀಸರು ಮಹಮ್ಮದ್ ಹನೀಫ್ ಗುಡ್ಡೆಮನೆ ಸಹಿತ ಹಲವರನ್ನು ಬಂಧಿಸಿದ್ದರು. ಬಳಿಕ ವಶಪಡಿಸಿಕೊಂಡ ಗೋವುಗಳನ್ನು ಪೊಲೀಸರು ಪಜೀರು ಗೋವನಿತಾಶ್ರಯ ಗೋ ಶಾಲೆಗೆ ನೀಡಿದ್ದರು.
ನ್ಯಾಯಾಲಯದ ಆದೇಶದ ಮೇರೆಗೆ ಜೂ.21ರಂದು ಆರೋಪಿಗಳಾದ ಮಹಮ್ಮದ್ ಹನೀಫ್ ಸಹಿತ 25 ಮಂದಿ ಪಜೀರು ಗೋಶಾಲೆಯಿಂದ ಗೋವುಗಳನ್ನು ಬಿಡಿಸಿಕೊಂಡು ಹೋಗಿದ್ದರು. ಆ ಬಳಿಕ ಆರೋಪಿಗಳು ಜೋಕಟ್ಟೆಯಲ್ಲಿ ಜನರನ್ನು ಸೇರಿಸಿ ಪಟಾಕಿ ಸಿಡಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸಿದ್ದಾರೆ.
ಈ ಹಿನ್ನಲೆಯಲ್ಲಿ, ವಿಶ್ವ ಹಿಂದು ಪರಿಷತ್ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹುನ್ನಾರ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಮಾತ್ರವಲ್ಲ, ಗೋಶಾಲೆಯಿಂದ ಬಿಡಿಸಿಕೊಂಡ ಗೋವುಗಳನ್ನು ವಾಪಸ್ ವಶಪಡಿಸಿಕೊಳ್ಳಲು ಆಗ್ರಹಿಸಿದೆ.