ಕುಂದಾಪುರ, ಜೂ 22 (Daijiworld News/SM): ವರ್ಷದ ಹಿಂದೆ ಕುಡಿದ ಅಮಲಿನಲ್ಲಿ ಹಣಕ್ಕಾಗಿ ಸಹೋದರಿಯನ್ನು ಪೀಡಿಸಿದ್ದಲ್ಲದೇ ಹಣ ಕೊಡದೇ ಇದ್ದಾಗ ಹಲ್ಲೆ ನಡೆಸಿ ಬಳಿಕ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದೋಷಿಯೆಂದು ಕುಂದಾಪುರ ನ್ಯಾಯಾಲಯ ಘೋಷಿಸಿದೆ. ಅಣ್ಣಪ್ಪ ಭಂಡಾರಿ (45) ಪ್ರಕರಣದಲ್ಲಿ ದೋಷಿಯಾಗಿದ್ದಾನೆ.
ಆದರೆ, ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿದ್ದು, ಜೂನ್ 28ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಘೋಷಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2018ರ ಜುಲೈ 22ರಂದು ಕುಂದಾಪುರದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ವಿಜಯಾ ಭಂಡಾರಿ (50) ಎಂಬ ಮಹಿಳೆಯ ತಮ್ಮ ಅಣ್ಣಪ್ಪ ಭಂಡಾರಿ (45) ಎಂಬಾತನಿಂದ ಮಾರಕ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಅಣ್ಣಪ್ಪ ಭಂಡಾರಿಯ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ವಿಚಾರಣೆ ಮುಂದುವರೆಸಿತ್ತು.
ಆರೋಪಿಯು ಕುಂದಾಪುರದಲ್ಲಿ ಕ್ಷೌರದ ಅಂಗಡಿಯನ್ನಿಟ್ಟುಕೊಂಡಿದ್ದು, ಕುಡಿತದ ಚಟ ಹೊಂದಿದ್ದ ಎಂದು ತಿಳಿದು ಬಂದಿದೆ. ಕುಡಿತಕ್ಕೆ ಹಣ ಸಾಲದೇ ಇದ್ದಾಗಲೆಲ್ಲ ಅಕ್ಕ ವಿಜಯಾ ಭಂಡಾರಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ.
2018ರ ಜುಲೈ 22ರಂದು ರಾತ್ರಿ ಮನೆಗೆ ಬಂದಿದ್ದ ಅಣ್ಣಪ್ಪ ಭಂಡಾರಿ ಅಕ್ಕ ವಿಜಯಾಳ ಜೊತೆ ಹಣದ ಬೇಡಿಕೆ ಇಟ್ಟಿದ್ದ. ಆದರೆ ಅಕ್ಕ ಕೊಡಲು ಹಣ ಇಲ್ಲ ಎಂದಾಗ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿತ್ತು. ಇದೇ ಸಂದರ್ಭ ಮನೆಯ ಮೂಲೆಯಲ್ಲಿದ್ದ ಕತ್ತಿಯಿಂದ ಅಕ್ಕ ವಿಜಯಾಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಕಿರುಚಾಟದ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದಿದ್ದು, ಗಂಭೀರಗೊಂಡಿದ್ದ ವಿಜಯಾಳರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭ ಪೊಲೀಸರು ಅಣ್ಣಪ್ಪ ಭಂಡಾರಿಯ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ವಿಜಯಾ ಚಿಕಿತ್ಸೆ ಫಲಕಾರಿಯಾಗದೇ ಜುಲೈ ೨೮ರಂದು ಮೃತಪಟ್ಟಿದ್ದು, ಪೊಲೀಸರು ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.