ಮಂಗಳೂರು, ಜೂ22(DaijiworldNews/AZM): ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೆಐಓಸಿಎಲ್ನ ಕಾವೂರು ಉಪನಗರದ ನೆಹರೂ ಭವನದಲ್ಲಿ ಯೋಗ ದಿನಾಚರಣೆ ನಡೆಯಿತು.
ಈ ವೇಳೆ ಅಧ್ಯಕ್ಷತೆಯನ್ನು ವಹಿಸಿದ್ದ ಕೆಐಓಸಿಎಲ್ ಕಂಪೆನಿ ಅಧ್ಯಕ್ಷ ಎಂ ವಿ ಸುಬ್ಬರಾವ್ ಮಾತನಾಡಿ, ಇಂದಿನ ಒತ್ತಡ ಜೀವನ ಶೈಲಿಯ ಅಡ್ಡ ಪರಿಣಾಮಗಳಿಂದಾಗಿ ನಮ್ಮನ್ನು ನಾವು ಸಂರಕ್ಷಿಸಲಾಗುತ್ತಿಲ್ಲ. ಅದಕ್ಕೆಲ್ಲಾ ಯೋಗವೇ ಉಪಾಯವಾಗಿದ್ದು, ಇದು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಜೊತೆಗೆ ಮನಸ್ಸಿಗೆ ಶಾಂತಿ, ಆರೋಗ್ಯ ಕಾಪಾಡಲು ಸೂಕ್ತವಾಗಿದೆ ಎಂದರು.
ಪತಂಜಲಿ ಯೋಗ ಸೇವಾ ಕೇಂದ್ರದ ಸಹಪ್ರಭಾರಿ ಡಾ ಜ್ಞಾನೇಶ್ವರ್ ನಾಯಕ್ ಮಾತನಾಡಿ, ದಿನನಿತ್ಯ ಯೋಗಾಭ್ಯಾಸ ಮಾಡಿದರೆ ಏನೆಲ್ಲಾ ಪ್ರಯೋಜನವಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಐಓಸಿಎಲ್ನ ಹಣಕಾಸು ನಿರ್ದೇಶಕ ಎಸ್ ಕೆ ಗೋರೈ, ಮಹಾಪ್ರಬಂಧ ರೋಕ್ ಡಿ ಸೋಜ, ದೇವಾನಂದ ಪೈ, ಎಸ್ ಎ ವಿಎಸ್ ಭಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಂದ್ರಕಲಾ ರಘುನಾಥ್ ನೇತೃತ್ವದಲ್ಲಿ 45 ವರ್ಷ ಮೇಲಿನ ಮಹಿಳೆಯರಿಗೆ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಇದೇ ವೇಳೆ ಯೋಗದ ಕೈಪಿಡಿ ಬಿಡುಗಡೆ ಮಾಡಲಾಯಿತು.
ಮ್ಯಾನೇಜರ್(ಮಾನವ ಸಂಪನ್ಮೂಲ) ಎಸ್ ಮುರುಗೇಶ್ ಸ್ವಾಗತಿಸಿ, ಸೀನಿಯರ್ ಮ್ಯಾನೇಜರ್ ಯು ಎಸ್ ಲಿಂಗಯ್ ವಂದಿಸಿದರು. ನರಸಿಂಹ ಕುಲಕರ್ಣಿ ಶಾಂತಿ ಮಂತ್ರ ಜಪಿಸಿದರು.