ಉಡುಪಿ, ಜೂ22(Daijiworld News/SS): ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಹೊರಹರಿವು ಪ್ರಾರಂಭವಾಗಿದೆ. ನೀರಿನ ಮಟ್ಟ 6.6 ಮೀಟರ್ಗೆ ಏರಿಕೆಯಾಗಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿರಿಯಡ್ಕ ಸಮೀಪದ ಬಜೆ ಅಣೆಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ, ನಗರ ವ್ಯಾಪ್ತಿಯಲ್ಲಿ ಜೂ.23ರಿಂದ ಪ್ರತಿದಿನ ನೀರು ಸರಬರಾಜು ಮಾಡುವುದಾಗಿ ನಗರಸಭೆ ಪೌರಾಯುಕ್ತರಾದ ಆನಂದ್ ಸಿ.ಕಲ್ಲೋಳಿಕರ್ ತಿಳಿಸಿದ್ದಾರೆ.
ಕುಡಿಯುವ ನೀರಿನ ಶುದ್ಧೀಕರಣ ಘಟಕದಿಂದ ನಿರಂತರವಾಗಿ ಪಂಪಿಂಗ್ ನಡೆಸಲಾಗುತ್ತಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ರೇಷನಿಂಗ್ ವ್ಯವಸ್ಥೆಯನ್ನು ಹಂತ–ಹಂತವಾಗಿ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಜೂ. 10ರ ಬಳಿಕ ಮಳೆಯಾಗುತ್ತಿರುವ ಪರಿಣಾಮ ಸ್ವರ್ಣ ನದಿಯಲ್ಲಿ ನೀರು ಹರಿದು ಬರುತ್ತಿದೆ. ಕಾರ್ಕಳದ ಮುಂಡ್ಲಿ ಅಣೆಕಟ್ಟಿಗೆ ಹಾಕಲಾದ ಗೇಟು ತೆರೆಯಲಾಗಿದೆ. ಇದರ ಪರಿಣಾಮ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದೆ. ಮೇ 5ರಂದು ಬಜೆಗೆ ಬರುವ ನೀರು ಸ್ಥಗಿತಗೊಂಡ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಕಳೆದೊಂದು ತಿಂಗಳಿನಿಂದ ನಗರಸಭೆ 35 ವಾರ್ಡ್'ಗಳನ್ನು 6 ವಿಭಾಗಗಳಾಗಿ ವಿಂಗಡಿಸಿ ಆರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು.
ಉಡುಪಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಬಜೆ ಜಲಾಶಯ ಬತ್ತಿಹೋಗಿ, ಸ್ವರ್ಣ ನದಿ ಪಾತ್ರದ ಹಳ್ಳಗಳಿಂದ ನೀರೆತ್ತಿ 6 ದಿನಕ್ಕೊಮ್ಮೆ ನಗರಕ್ಕೆ ನೀರು ಪೂರೈಸಲಾಗುತ್ತಿತ್ತು. ಇದೀಗ ಬಜೆ ಜಲಾಶಯಕ್ಕೆ ನೀರು ಬರುತ್ತಿರುವುದರಿಂದ ನಾಗರಿಕರು ನಿಟ್ಟುಸಿರುಬಿಡುವಂತಾಗಿದೆ.