ಮಂಗಳೂರು, ಜೂ22(Daijiworld News/SS): ದಕ್ಷಿಣ ಕನ್ನಡ ಜಿಲ್ಲೆಯ ಕೆಲಭಾಗದಲ್ಲಿ ಇತ್ತೀಚೆಗೆ ಅಲ್ಪ ಪ್ರಮಾಣದಲ್ಲಿ ಮಳೆಯಾದ ಕಾರಣ ಮಂಗಳೂರು ಮಹಾನಗರ ವ್ಯಾಪ್ತಿಗೆ ನೀರುಣಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತುಸು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ತುಂಬೆ ಅಣೆಕಟ್ಟಿಗೆ ಸಾಕಷ್ಟು ನೀರು ಹರಿದು ಬರುತ್ತಿದೆ. ಮಂಗಳೂರು ನಗರಕ್ಕೆ ತಿಂಗಳಿಗೂ ಅಧಿಕ ಕಾಲದಿಂದ ಕಾಡುತ್ತಿದ್ದ ನೀರಿನ ಸಮಸ್ಯೆ ನೀಗಿದ್ದು, ನೀರಿನ ಸರಬರಾಜು ನಿರಂತರವಾಗಿ ನಡೆಯುತ್ತಿದೆ. ಅಣೆಕಟ್ಟಿನಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ನಗರದಲ್ಲಿದ್ದ ನೀರಿನ ಕೊರತೆ ಕಡಿಮೆಯಾಗಿದೆ.
ಒಳಹರಿವು ಸಾಕಷ್ಟು ಇರುವುದರಿಂದ ತುಂಬೆ ಅಣೆಕಟ್ಟಿನಲ್ಲಿ ಈಗ 5 ಮೀ. ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಒಂದು ಗೇಟನ್ನು ತೆರೆದು ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕರಾವಳಿಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವ ಕಾರಣ, ನೀರು ಒಂದಷ್ಟು ಪ್ರಮಾಣದಲ್ಲಿ ತುಂಬೆ ಡ್ಯಾಂಗೆ ಹರಿದು ಬಂದಿದೆ ಎನ್ನಲಾಗಿದೆ.