ತ್ರಿಪುರ, ಡಿ 6: ಬುಡಕಟ್ಟು ಕುಟುಂಬವೊಂದು ಬಡತನದಿಂದ ಎಂಟು ಹೆಣ್ಣು ಮಗುವನ್ನು ಕೇವಲ 200 ರೂಪಾಯಿಗಳಿಗೆ ಮಾರಾಟ ಮಾಡಿರುವ ಘಟನೆ ದಕ್ಷಿಣ ಮಹಾರಾಣಿಪುರದ ಸರತ್ ಚಂದ್ರ ಎಡಿಸಿ ಗ್ರಾಮದಲ್ಲಿ ನಡೆದಿದೆ.
ಈ ಬುಡಕಟ್ಟು ಕುಟುಂಬ ಬಡತನದ ಕೂಪದಲ್ಲಿ ನರಳುತ್ತಿದ್ದು, ಹಸಿವಿನಿಂದ ಕಂಗಾಲಾಗಿತ್ತು. ಸರಿಯಾದ ಮನೆಯ ವ್ಯವಸ್ಥೆಯೂ ಈ ಕುಟುಂಬಕ್ಕೆ ಇಲ್ಲ.ಈ ಕುಟುಂಬದ ಬಳಿ ಇರುವುದು ಎಪಿಲ್ ಕಾರ್ಡ್. ಮನೆ ಹಾಗೂ ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳು ಸರಕಾರದಿಂದ ಈ ಕುಟುಂಬಕ್ಕೆ ದೊರೆಯುತ್ತಿಲ್ಲ. ಹೀಗಾಗಿ ಕುಟುಂಬಕ್ಕೆ ಆಹಾರ ಒದಗಿಸಲು ಮಗುವನ್ನು ಮಾರಾಟ ಮಾಡಿದೆ. ಇದನ್ನು ಸ್ವತಃ ಆ ಕುಟುಂಬದ ಕರ್ಣ ದೆಬರ್ಮಾ ಅವರು ಒಪ್ಪಿಕೊಂಡಿದ್ದಾರೆ.
ಈ ಬಡ ಕುಟುಂಬವು ಸರಕಾರದ ಬಳಿ ಬಿಪಿಎಲ್ ಕಾರ್ಡ್ ಮತ್ತು ಮನೆ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದೆ. ಆದರೆ ಮನವಿಯಿಂದ ಬಡ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಬಿದಿರು, ಸೌದೆಯನ್ನು ಮಾರಾಟ ಮಾಡಿ ಕುಟುಂಬ ಜೀವನ ಸಾಗಿಸುತ್ತಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಇದರಿಂದ ಕುಟುಂಬವನ್ನು ನಿರ್ವಹಿಸುವುದು ಕಷ್ಟ ಸಾಧ್ಯವಾಗಿದೆ ಎಂದು ಕರ್ಣ ದೆಬರ್ಮಾ ತಿಳಿಸಿದ್ದಾರೆ.
ಮನವಿ ಸಲ್ಲಿಸುವಾಗ ಸಮಸ್ಯೆ ಪರಿಹರಿಸುವ ಸುಳ್ಳು ಭರವಸೆಯನ್ನು ರಾಜಕೀಯ ನಾಯಕರು ನೀಡುತ್ತಿದ್ದು, ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.