ಮಂಗಳೂರು, ಜೂ22(Daijiworld News/SS): ಆಹಾರಗಳನ್ನು ಪ್ಲಾಸ್ಟಿಕ್ಗಳಲ್ಲಿ ಪ್ಯಾಕ್ ಮಾಡುವ ಬದಲು ಬಾಳೆ ಎಲೆಗಳಲ್ಲಿ ಪ್ಯಾಕ್ ಮಾಡಿ ವಿತರಣೆ ಮಾಡಿ ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಕಳಕಳಿಯ ಸಂದೇಶಕ್ಕೆ ಬೆಂಬಲದ ಮಹಾಪೂರವೇ ಹರಿದು ಬಂದಿದೆ.
ವೇದವ್ಯಾಸ್ ಕಾಮತ್ ಅವರು, ಆರೋಗ್ಯಕ್ಕೆ ಹಾನಿ ಮಾಡುವ ಪ್ರಕ್ರಿಯೆಯ ಬದಲು ನೈಸರ್ಗಿಕವಾಗಿ ದೊರೆಯುವ ಬಾಳೆ ಎಲೆಗಳಲ್ಲೇ ಸಾಂಪ್ರದಾಯಿಕವಾಗಿ ಆಹಾರಗಳನ್ನು ಪ್ಯಾಕ್ ಮಾಡಿ ವಿತರಣೆ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು, ಆಹಾರ ಕೂಡ ಫ್ರೆಶ್ ಆಗಿ ತಿನ್ನಲು ಸಾಧ್ಯ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ತನ್ನ ಕಳಕಳಿಯ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಇದೀಗ ಈ ಪೋಸ್ಟ್'ಗೆ ಅನೇಕ ಹೋಟೆಲ್ ಮಾಲೀಕರಿಂದ ಹಿಡಿದು ಜನಸಾಮಾನ್ಯರು ಕೂಡಾ ಶಾಸಕರ ಸಲಹೆಯನ್ನು ಮೆಚ್ಚಿ ಕಾಮೆಂಟ್ ಹಾಕಿದ್ದು, ಆನ್ಲೈನ್ ಬುಕ್ಕಿಂಗ್ ಮೂಲಕ ಆಹಾರ ಪೂರೈಕೆ ಮಾಡುವ ಬೃಹತ್ ಕಂಪನಿಗಳಾದ ಝೊಮೇಟೋ ಹಾಗೂ ಸ್ವಿಗ್ಗಿ ಕಂಪನಿಗಳು ಕೂಡಾ ಶಾಸಕರ ಈ ಚಿಂತನೆಯನ್ನು ಮೆಚ್ಚಿ ತಮ್ಮ ಬೆಂಬಲ ಸೂಚಿಸಿವೆ. ಬಾಳೆ ಎಳೆ ಮೂಲಕ ಆಹಾರ ಪ್ಯಾಕ್ ಮಾಡಿ ಸಪ್ಲೈ ಮಾಡಿಸುವ ಬಗ್ಗೆ ಕಂಪನಿಗಳು ತಮ್ಮ ಇಂಗಿತ ವ್ಯಕ್ತಪಡಿಸಿವೆ.
ಈಗಾಗಲೇ ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ 'ತಂದೂರ್ ರೆಸ್ಟೋರೆಂಟ್' ಮಾಲಕರು ಶಾಸಕರ ಮನವಿಗೆ ಬೆಂಲಿಸಿದ್ದು, ತಮ್ಮ ಹೋಟೆಲ್'ನಲ್ಲಿ ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಆಹಾರ ಪ್ಯಾಕ್ ಮಾಡುವ ಬದಲು ಬಾಳೆ ಎಳೆಯಲ್ಲಿ ಸಪ್ಲೈ ಮಾಡಲು ನಿರ್ಧರಿಸಿದ್ದಾರೆ.
ಈ ನಡುವೆ ಆಹಾರ ಪ್ಯಾಕಿಂಗ್ನಲ್ಲಿ ಬಾಳೆ ಎಲೆ ಬಳಕೆ ಮಾಡುವ ಬಗ್ಗೆ ಹಾಕಿರುವ ಶಾಸಕರ ಸಂದೇಶಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ.