ಮಂಗಳೂರು, ಜೂ21(Daijiworld News/SS): ಕುವೈತ್'ಗೆ ಉದ್ಯೋಗಕ್ಕೆಂದು ತೆರಳಿ, ಬಳಿಕ ವಂಚನೆಗೊಳಗಾದ 35 ಮಂದಿ ಮಂಗಳೂರಿಗರು ಕಳೆದ 6 ತಿಂಗಳಿನಿಂದ ಕುವೈತ್'ನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಯುವಕರನ್ನು ಶೀಘ್ರ ಮಂಗಳೂರಿಗೆ ಕರೆತರಲು ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಿಂದ ಕುವೈತ್'ಗೆ ತೆರಳಿದ್ದ ಯುವಕರು ಸರಿಯಾದ ಕೆಲಸ ದೊರೆಯದೆ ಕಳೆದ 6 ತಿಂಗಳಿಂದ ಅಲ್ಲಿ ಪರದಾಟ ನಡೆಸಿದ್ದಾರೆ. ಈ ಯುವಕರ ಜೊತೆ ಈಗಾಗಲೇ ನಾನು ಹಲವು ಬಾರಿ ಮಾತನಾಡಿದ್ದೇನೆ. ಮಾತ್ರವಲ್ಲ, ಅವರಿಗೆ ಸುರಕ್ಷಿತವಾಗಿ ಮತ್ತೆ ಮಂಗಳೂರು ಸೇರಿಸುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ನಾನು ಯಾವತ್ತೂ ಕೊಟ್ಟ ಮಾತು ತಪ್ಪುವುದಿಲ್ಲ. ಸಂಕಷ್ಟದಲ್ಲಿರುವ ಯುವಕರಿಗೆ ಕೊಟ್ಟ ಮಾತಿನಂತೆ ಟಿಕೆಟ್ ವ್ಯವಸ್ಥೆ ಮಾಡಿದ್ದು, ಶೀಘ್ರ ಅವರನ್ನು ಮರಳಿ ಕರೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕುವೈತ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ಬಗ್ಗೆ ಈಗಾಗಲೇ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಸಚಿವ ಸದಾನಂದ ಗೌಡ ಸೇರಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಈ ಬಗ್ಗೆ ನಿರಂತರ ಮಾತುಕತೆ ನಡೆಸಿದ್ದೇನೆ. ಯುವಕರನ್ನು ಮರಳಿ ಕರೆತರಲು ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಶೀಘ್ರ ಸಮಸ್ಯೆಯನ್ನು ಬಗೆಹರಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಯುವಕರನ್ನು ಮಂಗಳೂರಿಗೆ ಕರೆತರಲು ಬಹಳ ಮುಖ್ಯವಾಗಿ ಬೇಕಾಗಿದ್ದ ಟಿಕೆಟ್ ವಿಚಾರದಲ್ಲಿ ಗೊಂದಲವಿತ್ತು. ಇದೀಗ, ಕುವೈಟ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ ಮೆಂಟ್ ಕಂಪೆನಿಯು ಕೂಡ ಯುವಕರನ್ನು ಕರೆತರಲು ಬೇಕಾದ ಟಿಕೆಟ್'ನ ವೆಚ್ಚವನ್ನು ನೀಡುವುದಾಗಿ ಹೇಳಿದೆ. ಈಗಾಗಲೇ ಯುವಕರಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.