ಮಂಗಳೂರು, ಜೂ21(Daijiworld News/SS): ಯೋಗ ನಮ್ಮ ದೇಶದ ಸಂಸ್ಕೃತಿ ಎಂಬ ರೀತಿಯಲ್ಲಿ ಬಿಂಬಿತವಾಗಿದೆ. ಭಾರತದ ಸಂಸ್ಕೃತಿಯ ಪ್ರತೀಕವಾದ ಯೋಗ ಪದ್ಧತಿಗೆ ವಿಶ್ವದೆಲ್ಲೆಡೆ ಗೌರವ ಸಿಗುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಯೋಗ ಕ್ಷೇತ್ರಕ್ಕೆ ಬಾಬಾ ರಾಮದೇವ್ ಗುರೂಜಿ ಅವರ ಕೊಡುಗೆ ಅಪಾರವಾಗಿದೆ. ಯೋಗ ಕೇವಲ ಯೋಗವಾಗಿರದೆ ನಮ್ಮ ದೇಶದ ಸಂಸ್ಕೃತಿಯ ಬಿಂಬವಾಗಿದೆ. ವಿಶ್ವಸಂಸ್ಥೆ 'ಯೋಗ ದಿನ'ವನ್ನು ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಂದ ಯೋಗವು ದೇಶ ಮಾತ್ರವಲ್ಲ, ಈಡೀ ವಿಶ್ವದಲ್ಲಿಯೇ ಮತ್ತಷ್ಟು ಹೊಳಪು ಪಡೆದುಕೊಂಡಿದೆ ಎಂದು ಹೇಳಿದರು.
ಯೋಗ ಮಾಡಿದರೆ ಉತ್ತಮ ಆರೋಗ್ಯ ದೊರೆಯುತ್ತದೆ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿ. ಬಿಡುವಿಲ್ಲದ ಒತ್ತಡದ ಜೀವನಕ್ಕೆ ಯೋಗ ಪ್ರಯೋಜನಕಾರಿಯಾಗಿದೆ. ಆರೋಗ್ಯ ಪೂರ್ಣ ವಾತಾವರಣ ನಿರ್ಮಿಸಲು ಯೋಗದಿಂದ ಸಾಧ್ಯವಿದೆ ಎಂದು ಹೇಳಿದರು.
ಯೋಗ ಕೇವಲ ಇಂದಿಗೆ ಮಾತ್ರ ಸೀಮಿತವಾಗಿರಬಾರದು. ಎಲ್ಲರಿಗೂ ಯೋಗದ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕಿದೆ. ಪ್ರತಿ ದಿನ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶದ ಯುವಜನರು, ನಾಗರಿಕರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಯೋಗವನ್ನು ಪ್ರತಿನಿತ್ಯ ಕಡ್ಡಾಯವಾಗಿ ಪಾಲಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ. ಯುವ ಸಮುದಾಯ ಯೋಗವನ್ನು ಅಭ್ಯಾಸ ಮಾಡಬೇಕು. ಯೋಗದಿಂದ ಯುವ ಜನತೆಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂದು ಹೇಳಿದರು.