ಕಾಸರಗೋಡು, ಜೂ 21 (Daijiworld News/MSP): ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿನ ವನ್ಯಜೀವಿ ಉಪಟಳ ಹಾಗೂ ಗಡಿಪ್ರದೇಶಗಳ ಸಮಸ್ಯೆಗಳ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ಬಾಬು ಹಾಗೂ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸಭೆ ನಡೆಸಿದರು.
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ನಾನಾ ಮಟ್ಟದಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಕಾಸರಗೋಡು ದೇಲಂಪಾಡಿ ಗ್ರಾಮ ಪಂಚಾಯಿತ್ ಕಚೇರಿ ಹಾಗೂ ಕರ್ನಾಟಕ ಮಂಡೆಕೋಲು ಗ್ರಾಮ ಕಚೇರಿ, ಕಂದಾಯ-ಅರಣ್ಯ-ಸರ್ವೇ ಮುಂತಾದ ಇಲಾಖೆಗಳ ಅಧಿಕಾರಿಗಳು ಚರ್ಚೆ ನಡೆಸುವರು. ಬಳಿಕ ಎರಡು ರಾಜ್ಯಗಳ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಚರ್ಚೆ ನಡೆಸುವರು.
ದೇಲಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆಗಳ ಸಹಿತ ವನ್ಯಜೀವಿಗಳ ಉಪಟಳ ತಡೆಯುವುದಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ವರ್ಷಗಳಿಂದ ಗಡಿ ಸಮಸ್ಯೆ ಇರುವ ಕಡೆ ಸರ್ವೆ ನಡೆಸಿ ಗಡಿ ವಿವಾದವನ್ನು ಬಗೆಹರಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಕೆ. ಅನೂಪ್ ಕುಮಾರ್, ಕರ್ನಾಟಕ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಶಂಕರ ಗೌಡ, ಸುಬ್ರಹ್ಮಣ್ಯ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಅಸ್ಟಿನ್ ಪಿ. ಸೋನಾಸ್, ಕಾಸರಗೋಡು ವಲಯ ಅರಣ್ಯಅಧಿಕಾರಿ ಎನ್. ಅನಿಲ್ ಕುಮಾರ್, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್., ಸುಳ್ಯ ತಾಲೂಕು ತಹಸೀಲ್ದಾರ್ ಕುಂಞಿಅಹಮ್ಮದ್, ದಕ್ಷಿಣ ಕನ್ನಡ ಡಿಡಿಎಲ್ಆರ್ ಕೆ. ಪ್ರಸಾದೀನಿ, ಎಡಿಎಲ್ಆರ್ ಎ. ವೆಂಕಟೇಶ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.