ಬೆಳ್ತಂಗಡಿ, ಜೂ21(Daijiworld News/SS): ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದ ಸುಮಾರು 13 ಜಿಲ್ಲೆಗಳಿಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ರಾಜ್ಯದ ಹಲವೆಡೆ ನೀರಿನ ಕೊರತೆ ಇರುವ ಹಿನ್ನಲೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದು ಈಗಾಗಲೇ 13 ಜಿಲ್ಲೆಗಳ 49 ತಾಲೂಕಿನ 332 ಹಳ್ಳಿಗಳ 77,453 ಕುಟುಂಬಗಳಿಗೆ ಪ್ರತಿವಾರ ನೀರು ಪೂರೈಸಲಾಗುತ್ತಿದೆ. ಈ ಬಗ್ಗೆ ತುರ್ತಾಗಿ ಅನುದಾನವನ್ನು ಡಾ.ಹೆಗ್ಗಡೆ ಬಿಡುಗಡೆ ಮಾಡಿದ್ದಾರೆ.
ಸಮಸ್ಯೆಯ ತೀವ್ರತೆಯನ್ನು ಗಮನಿಸಿ ಮುಂದಕ್ಕೂ ಈ ಕಾರ್ಯಕ್ರಮ ವಿಸ್ತರಿಸಲು ಆದೇಶ ನೀಡಿದ್ದಾರೆ ಎಂದು ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ಹಾಗೂ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ರಾಯಚೂರು, ಬಾಗಲ ಕೋಟೆ, ಗದಗ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ.