ಚೆನ್ನೈ, ಸೆ 12: ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇಂದು ನಡೆದ ಅಣ್ಣಾ ಡಿಎಂಕೆ ಪಕ್ಷದ ಕಾರ್ಯಾಕಾರಿಣಿ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಕೆ ಶಶಿಕಲಾ ಹಾಗೂ ಉಪಕಾರ್ಯದರ್ಶಿ ಟಿಟಿವಿ ದಿನಕರ್ ಅವರನ್ನು ಪಕ್ಷದಿಂದಲೇ ಉಚ್ಚಟಿಸಲಾಗಿದೆ.
ಚೆನ್ನೈನಲ್ಲಿ ಎಐಎಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್, 2 ಬಣಗಳ ವಿಲೀನ, ಪಕ್ಷದ ಚಿನ್ಹೆ ಹಾಗೂ ಇನ್ನಿತರ 15 ಪ್ರಮುಖ ಅಂಶಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಇಂದು ಸಭೆ ಸೇರಿತ್ತು. ಇದೇ ಸಭೆಯಲ್ಲಿ ಶಶಿಕಲಾ ಎಂಡ್ ಟೀಂಗೆ ಗೇಟ್ ಪಾಸ್ ನೀಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಮಿಳುನಾಡಿನ ಮಾಧ್ಯಮದ ವರದಿ ತಿಳಿಸಿದೆ.
ಸದ್ಯ ಅಕ್ರಮ ಆಸ್ತಿ ಗಳಿಕೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಜೈಲುಕಂಬಿ ಎಣಿಸುತ್ತಿದ್ದು, ಇದೀಗ ಅವರ ರಾಜಕೀಯ ಜೀವನಕ್ಕೂ ಮತ್ತೊಂದು ಹೊಡೆತ ಬಿದ್ದಿದೆ. ಹೀಗಾಗಿ ರಾಜಕೀಯವಾಗಿ ಅವರ ಬದುಕು ಮುಗಿದ ಅಧ್ಯಾಯದಂತಾಗಿದೆ.