ಕುಂದಾಪುರ, ಜೂ21(Daijiworld News/SS): ಬೀದಿನಾಯಿಗಳ ದಾಳಿಗೆ ಸಿಲುಕಿ ಇಬ್ಬರು ಮಕ್ಕಳ ಸಹಿತ ಓರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಕಂಡ್ಲೂರು ಹೊಳೆ ಬದಿ ನಿವಾಸಿ ಅದ್ವಿತ್(4), ಆಯೇಜಾ(3) ಹಾಗೂ ಕನಕಪೂಜಾರಿ(45) ಗಾಯಾಳುಗಳು.
ಕಂಡ್ಲೂರು ಸೇತುವೆ ಬಳಿ ಮಕ್ಕಳು ಮನೆ ಅಂಗಳದಲ್ಲಿ ಆಟವಾಡುತ್ತಿದ್ದಾಗ ನಾಯಿಗಳು ದಾಳಿ ನಡೆಸಿದ್ದು, ಮೂವರಿಗೆ ಕಚ್ಚಿವೆ. ಉಳಿದ ಮಕ್ಕಳ ಮೇಲೂ ದಾಳಿ ನಡೆಸಿದ್ದು ಪರಚಿದ ಗಾಯಗಳಾಗಿವೆ.
ಅದ್ವಿತ್ ಮತ್ತು ಆಯೇಜಾ ಗಂಭೀರ ಗಾಯಗೊಂಡಿದ್ದಾರೆ. ಬಿಡಿಸಲು ಬಂದ ಕನಕಾ ಪೂಜಾರಿ ಕೈ ಕಚ್ಚಿ ಎಳೆದಾಡಿದೆ. ಗಾಯಗೊಂಡವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೀದಿನಾಯಿಗಳ ಕಾಟ ಹೆಚ್ಚಾಗಲು ಕಂಡ್ಲೂರು ಪರಿಸರದಲ್ಲಿ ಪ್ರಾಣಿಗಳ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಂಡ್ಲೂರು ಸೇತುವೆಯ ಮೇಲ್ಬಾಗದಲ್ಲಿ ಕೋಳಿ ಹಾಗೂ ಇತರ ಪ್ರಾಣಿಗಳ ತ್ಯಾಜ್ಯ ಎಸೆಯುತ್ತಿದ್ದು, ಹೊಳೆಯ ನೀರಿನ ಹರಿವಿಗೆ ಕಂಡ್ಲೂರು ಪ್ರದೇಶದ ತೀರಗಳಲ್ಲಿ ತ್ಯಾಜ್ಯ ಕೊಳೆಯುತ್ತಿದೆ. ಇದನ್ನು ಸೇವಿಸಲು ನಾಯಿಗಳು ಇಲ್ಲಿ ಬರುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.