ಮಂಗಳೂರು,ಜೂ20(DaijiworldNews/AZM): ಕೇಂದ್ರ ಸರ್ಕಾರದ ಕಿಸಾನ್ ಯೋಜನೆಯಡಿಯಲ್ಲಿ ರೈತರ ಆದಾಯ ವೃದ್ದಿಸಲಿದ್ದು,ರೈತ ಕುಟುಂಬಗಳಿಗೆ ಪ್ರತಿ ವರ್ಷ 6ಲಕ್ಷ ರೂಪಾಯಿ ಜಮೆ ಮಾಡಲಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,30,000 ರೈತರಿದ್ದಾರೆ.ರೈತ ಕುಟುಂಬಗಳಿಗೆ ಪ್ರತಿವರ್ಷ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ 6 ಲಕ್ಷ ರೂಪಾಯಿ ಜಮೆ ಮಾಡಲಾಗುತ್ತದೆ. ಇದಕ್ಕಾಗಿ ನಾಡಕಚೇರಿ, ತಾಲೂಕು ಕಚೇರಿಗೆ ರೈತರು ದಾಖಲೆ ಸಲ್ಲಿಸಬೇಕು ಎಂದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆ ಕಡಿಮೆ ಇದೆ.ಭತ್ತದ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಶೇಕಡಾ 75 ಕ್ಕಿಂತ ಭತ್ತ ಬಿತ್ತನೆ ವಿಫಲಗೊಂಡಲ್ಲಿ ಶೇಕಡಾ 25 ರಷ್ಟು ಪರಿಹಾರ ಸಿಗಲಿದೆ.ಮಧ್ಯಂತರ ವಿಕೋಪ ಸಂಭವಿಸಿದರೆ ವಿಮಾ ಸಂಸ್ಥೆಯ ಸಹಾಯ ದೊರಕಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಇದು ಒಳ್ಳೆಯ ಯೋಜನೆಯಾಗಿದೆ ಎಂದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕೂಡಾ ಇದ್ದು,ಇದು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಆಗಿದ್ದಲ್ಲಿ ವಿಮಾ ಪರಿಹಾರ ದೊರಕಲಿದೆ. ಇದನ್ನು ದಕ್ಷಿಣ ಕನ್ನಡದ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹಾಗೂ ದಕ್ಷಿಣ ಕನ್ನಡದ 231 ಗ್ರಾಮ ಪಂಚಾಯತ್ ಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ ಎಂದು ತಿಳಿಸಿದ ಅವರು 2019 ರ ಮುಂಗಾರು ಹಂಗಾಮಿನ ವಿಮಾ ಕಂತು ಪಾವತಿಸಲು ಜೂನ್ ಕಡೆಯ ದಿನ ಎಂದು ಹೇಳಿದರು.
ಯುಪಿಓಆರ್ ನಗರಾಸ್ತಿ ಮಾಲೀಕತ್ವದ ಹಕ್ಕು ದಾಖಲೆಗಳ ಯೋಜನೆಯಡಿ ನಗರದಲ್ಲಿರುವ ಆಸ್ತಿಗಳ ಅಳತೆ ಕೆಲಸ ಮಾಡಲಾಗುತ್ತದೆ ಎಂದರು. ಮುಂಗಾರು ಮಳೆಯಿಂದಾಗುವ ಹಾನಿ ತಡೆಗಟ್ಟಲು ಕ್ರಮ ಜಾರಿಗೊಳಿಸಲಿದ್ದು,ವಿಪತ್ತು ನಿರ್ವಹಣೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 24x7 ಕಂಟ್ರೋಲ್ ರೂಂ , ಹಾಗೂ ಪ್ರಾಕೃತಿಕ ವಿಕೋಪದ ಕುರಿತು ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.