ಮಂಗಳೂರು , ಜೂ20(Daijiworld News/SS): ಹೋಟೆಲ್ಗಳಲ್ಲಿ ತಿಂಡಿ ಕಟ್ಟಲು ಪ್ಲಾಸ್ಟಿಕ್ ಬದಲು ಬಾಳೆ ಎಲೆ ಉಪಯೋಗಿಸಿ ಎಂದು ಝೊಮೊಟೋ, ಸ್ವಿಗ್ಗಿ, ಊಬರ್ ಈಟ್ಸ್'ಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.
ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಮಾಲಿನ್ಯವಾಗುವುದನ್ನು ತಡೆಯಲು ಆಹಾರ ಡೆಲಿವರಿ ಸಂಸ್ಥೆಗಳಿಗೆ ಕಾರ್ಯಪ್ರವೃತ್ತರಾಗಲು ಶಾಸಕರು ಲಿಖಿತ ಮನವಿ ಮಾಡಿದ್ದಾರೆ.
ಕರಾವಳಿಯಲ್ಲಿರುವ ಹೆಚ್ಚಿನ ಹೋಟೆಲ್'ಗಳಲ್ಲಿ ತಿಂಡಿ ಅಥವಾ ಊಟವನ್ನು ಬಾಳೆ ಎಲೆಯಲ್ಲೇ ಬಡಿಸಲಾಗುತ್ತದೆ. ಬಾಳೆ ಎಲೆಗಳನ್ನು ಬಳಸುವುದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ಪೊಟ್ಟಣ ಕಟ್ಟಲು ಬಾಳೆ ಎಲೆ ಬಳಸಿ ಎಂದು ಆಹಾರ ಡೆಲಿವರಿ ಸಂಸ್ಥೆಗಳಿಗೆ ಶಾಸಕರು ಕಿವಿಮಾತು ಹೇಳಿದ್ದಾರೆ.
ಹೋಟೆಲ್'ಗಳಲ್ಲಿ ಸಾಂಬಾರು ಪದಾರ್ಥಗಳನ್ನು ಬಿಟ್ಟು ಉಳಿದ ಆಹಾರವನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುವಂತಹ ಕಾರ್ಯಕ್ಕೆ ಮುಂದಾಗಬೇಕು. ಕರಾವಳಿಯ ಖಾದ್ಯಗಳಾದ ಮೂಡೆ, ಕೊಟ್ಟಿಗೆ, ಗಟ್ಟಿ ಮುಂತಾದುವುಗಳನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿಕೊಟ್ಟರೆ ಆರೋಗ್ಯಕ್ಕೂ ಒಳ್ಳೆಯದು. ಪ್ಲಾಸ್ಟಿಕ್ ಬಳಸಿ ಕಟ್ಟಿದ ತಿಂಡಿಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಲಹೆ ನೀಡಿದ್ದಾರೆ.
ವಿಶೇಷವೆಂದರೆ, ಶಾಸಕರ ಮನವಿಗೆ ಸ್ವಿಗ್ಗಿ ಸಂಸ್ಥೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಭರವಸೆ ನೀಡಿದೆ.
ಶಾಸಕರ ಈ ಕಾರ್ಯಕ್ಕೆ ಕರಾವಳಿಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.