ಉಡುಪಿ, ಜೂ20(Daijiworld News/SS): ಘಮ ಘಮ ಅನ್ನೋ ಮಲ್ಲಿಗೆ ಬೆಳೆದ ರೈತರ ಬಾಳಲ್ಲಿ ಸುವಾಸನೆ ಇಲ್ಲದಾಗಿದೆ. ಹೌದು. ಕಷ್ಟಪಟ್ಟು ಮಲ್ಲಿಗೆ ಬೆಳೆದ ರೈತರಿಗೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ. ಮಲ್ಲಿಗೆ ಹೂಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಜನವರಿಯಲ್ಲಿ ಗರಿಷ್ಠ 1,250 ಇದ್ದ ದರ ಈಗ ಕೇವಲ 90ರ ಗಡಿ ತಲುಪಿದ್ದು, ಮಲ್ಲಿಗೆ ಹೂವಿನ ಬೆಲೆ ಇದೀಗ ಅಕ್ಷರಶಃ ಪಾತಾಳಕ್ಕೆ ಕುಸಿದಿದೆ.
ನಗರದ ಮಾರುಕಟ್ಟೆಯಲ್ಲಿ ಕರಾವಳಿಯ ಪ್ರಸಿದ್ಧ ಶಂಕರಪುರ ಮಲ್ಲಿಗೆಯ ದರ ಪಾತಾಳಕ್ಕೆ ಕುಸಿದಿದೆ. ಜನವರಿಯಲ್ಲಿ ಗರಿಷ್ಠ 1,250 ಇದ್ದ ದರ ಈಗ ಕೇವಲ 100ರ ಗಡಿ ತಲುಪಿದೆ. ಬೆಲೆ ಪಾತಾಳಕ್ಕೆ ಮುಖ ಮಾಡಿದ್ದರಿಂದ ಮಲ್ಲಿಗೆ ಕೃಷಿ ಬೆಳೆಗಾರನ ಮುಖ ಬಾಡಿದೆ. ಶಂಕರಪುರದ ಮಾರುಕಟ್ಟೆಯಲ್ಲಿ ಮಲ್ಲಿಗೆಯ ದರ ಅಟ್ಟೆಗೆ 90 ರೂಪಾಯಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇದುವರೆಗೂ ಮಲ್ಲಿಗೆ ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತಿದ್ದ ಪರಿಣಾಮ ರೈತರು ಲಾಭ ಗಳಿಸುತ್ತಿದ್ದರು. ಆದರೆ, ಈ ಬಾರಿ ಮಲ್ಲಿಗೆ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಮಲ್ಲಿಗೆಯ ಅಟ್ಟೆಗೆ 90-110 ರೂಪಾಯಿ ಬೆಲೆ ಸಿಗುತ್ತಿರುವುದರಿಂದ ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರು ಇದೀಗ ಅಕ್ಷರಶಃ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಸಾಮಾನ್ಯವಾಗಿ ಮಲ್ಲಿಗೆ ದರ 150 ರೂ. ಗಳಿಗಿಂತ ಹೆಚ್ಚಿರುತ್ತದೆ. ಆದರೆ, ಈ ಬಾರಿ ಒಮ್ಮೆಲೆ ಮಲ್ಲಿಗೆ ಹೂ ಮೂರ್ನಾಲ್ಕು ಪಟ್ಟು ಹೆಚ್ಚಿದ್ದರಿಂದ ಕೊಯ್ದು ಕಟ್ಟಲಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ದರವೂ ಇಲ್ಲ. ಹೀಗಾಗಿ ಅರ್ಧದಷ್ಟು ಮಲ್ಲಿಗೆ ಗಿಡದಲ್ಲೇ ಹಾಳಾಗುತ್ತಿದೆ.
ಕುಂದಾಪುರ ಪ್ರದೇಶದಲ್ಲಿ ಬೆಳೆಯುವ ಮಲ್ಲಿಗೆ ಹೂಗಳಿಗೆ ಭಟ್ಕಳ ಮಲ್ಲಿಗೆ ಎಂದು ಕರೆಯುತ್ತಾರೆ. ಶಂಕರಪುರ, ಶಿರ್ವ ಪ್ರದೇಶದಲ್ಲಿ ಬೆಳೆಯನ್ನು ಶಂಕರಪುರ ಮಲ್ಲಿಗೆ ಎಂದೂ, ಪುತ್ತೂರು, ಸುಳ್ಯ ಭಾಗದಲ್ಲಿ ಬೆಳೆಯುವ ಮಲ್ಲಿಗೆಯನ್ನು ಮಂಗಳೂರು ಮಲ್ಲಿಗೆ ಎಂದು ಕರೆಯುತ್ತಾರೆ.