ಮಂಗಳೂರು, ಜೂ20(Daijiworld News/SS): ಸಮಾಜ ವಿರೋಧಿ ಅಂಶಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ಬಾರ್ಗಳಲ್ಲಿ ಪೊಲೀಸರಿಂದ ಅಚ್ಚರಿಯ ಪರಿಶೀಲನೆ ನಡೆದಿದೆ.
ಯಾವುದೇ ರೀತಿಯ ಡ್ರಗ್ಸ್ ಪದಾರ್ಥಗಳು, ಹಿಂಸಾತ್ಮಕ ಕೃತ್ಯಕ್ಕೆ ಬಳಸುವ ಮಾರಕಾಸ್ತ್ರಗಳು ಬಾರ್ ಒಳಗೆ ಸೇರದಂತೆ ಮತ್ತು ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಾರ್ಗಳಲ್ಲಿ ಪೊಲೀಸರು ಈ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನಗರದಲ್ಲಿ ಕೆಲ ದಿನಗಳಿಂದ ಬಾರ್ಗಳ ಮುಂದೆ ಕುಡುಕರ ಹಾಗೂ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಬಾರ್ಗಳ ಮುಂದೆ ಕುಡಿದು ಗಲಾಟೆ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲ, ಕೆಲ ಕಿಡಿಗೇಡಿಗಳು ನಗರದಲ್ಲಿ ಯುವ ಸಮೂಹಕ್ಕೆ ಮಾದಕ ವಸ್ತು ಹಾಗೂ ಮಾರಕಾಸ್ತ್ರಗಳನ್ನು ನೀಡುವ ಮೂಲಕ ದಾರಿತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೂಡ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಾರ್ಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.