ಬೆಳ್ತಂಗಡಿ, ಜೂ20(Daijiworld News/SS): ಸುಮಾರು 2 ದಶಕಗಳ ಬಳಿಕ ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಆ ಮೂಲಕ 47 ಕುಟುಂಬಗಳಲ್ಲಿ ಸೌಭಾಗ್ಯದ ಬೆಳಕು ಚೆಲ್ಲುವ ಕೆಲಸ ಪೂರ್ಣಗೊಂಡಿದೆ.
ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯ 47 ಬುಡಕಟ್ಟು ಕುಟುಂಬಗಳ ಬಹು ದಿನಗಳ ಕನಸು ಇದೀಗ ನನಸಾಗಿದ್ದು, ಕುಗ್ರಾಮದ ಜನ ಶತಮಾನದ ಬಳಿಕ ವಿದ್ಯುತ್ ಸಂಪರ್ಕ ಪಡೆದ ಸಂತಸಲ್ಲಿದ್ದಾರೆ. ಸುಮಾರು 2 ದಶಕಗಳ ಹೋರಾಟದ ಬಳಿಕ ಮೆಸ್ಕಾಂ ಈ ಕಾಲೋನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು, ಜನರ ಹರುಷಕ್ಕೆ ಕಾರಣವಾಗಿದೆ.
ಬಾಂಜಾರು ಮಲೆಕುಡಿಯ ಕಾಲೋನಿಯ 47 ಬುಡಕಟ್ಟು ಕುಟುಂಬಗಳ ಜನರು ಸುಮಾರು 2 ದಶಕಗಳಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕಿಸಲು ಅಧಿಕಾರಿಗಳಿಗೆ ಮನವಿಯ ಮೇಲೆ ಮನವಿ ಮಾಡಿದ್ದಾರೆ. ಹೋರಾಟದ ಮೇಲೆ ಹೋರಾಟ ನಡೆಸಿದ್ದಾರೆ. ಆದರೆ, ಈ ಬುಡಕಟ್ಟು ಕಾಲೋನಿಗೆ ವಿದ್ಯುತ್ ಪೂರೈಕೆಗಾಗಿ ಹಲವಾರು ಯೋಜನೆಯಡಿ ಕಾಮಗಾರಿ ಮಂಜೂರುಗೊಂಡರೂ, ಅರಣ್ಯ ಹಾಗೂ ಖಾಸಗಿ ಜಮೀನಿನ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಸಾಧ್ಯವಾಗಿರಲಿಲ್ಲ.
ಆದರೆ ಈ ಬಾರಿ 47 ಮಲೆಕುಡಿಯ ಕುಟುಂಬಗಳ ನಿರಂತರ ಹೋರಾಟದ ಫಲವಾಗಿ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯು ವಿದ್ಯುತ್ ಸಂಪರ್ಕದಿಂದ ಬೆಳಗುವಂತಾಗಿದೆ.
ಈ ಕುರಿತು ಮಾತನಾಡಿರುವ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್, ಯಾವುದೇ ಮರ ಕಡಿಯದೆ, ಖಾಸಗಿ ಜಮೀನಿನ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಖಾಸಗಿ ಜಮೀನಿನ ಮಾಲೀಕರು ಎಚ್ ಟಿ ಲೈನ್'ಗೆ ಅವಕಾಶ ನೀಡುವುದಿಲ್ಲ. ಆದರೆ ಇಬ್ಬರು ಎಸ್ಟೇಟ್ ಮಾಲೀಕರು ತಮ್ಮ ಜಮೀನಿನಲ್ಲಿ ಉಚಿತವಾಗಿ ವಿದ್ಯುತ್ ಕಂಬ ಹಾಕಲು ಅವಕಾಶ ನೀಡಿದರು ಎಂದು ಹೇಳಿದ್ದಾರೆ.
ಒಟ್ಟು 1.2 ಕೋಟಿ ರುಪಾಯಿ ವೆಚ್ಚದಲ್ಲಿ ಮೂರು ವಿದ್ಯುತ್ ಟ್ರಾನ್ಸಫಾರ್ಮರ್'ಗಳು ಹಾಗೂ 450 ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. 6.4 ಕಿಲೋಮೀಟರ್ ದೂರ ಹೈಟೆನ್ಶನ್ ವಿದ್ಯುತ್ ಲೈನ್ ಹಾಗೂ 5.3 ಕಿಲೋಮೀಟರ್ ದೂರ ಲೋ ಟೆನ್ಶನ್ ಲೈನ್ ತಂತಿ ಎಳೆಯಲಾಗಿದೆ ಎಂದು ತಿಳಿಸಿದ್ದಾರೆ.