ಮಂಗಳೂರು ಡಿ 6: ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಮುಖಂಡ ಕಲ್ಲಡ್ಕ ಗಣೇಶ್ ಶೆಟ್ಟಿ ಡಿ 6 ರಂದು ಬುಧವಾರ ದೂರು ನೀಡಿದ್ದು ದ್ವಾರಕನಾಥ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯ ವಿವರ :
ನಗರದ ಪುರಭವನದಲ್ಲಿ ಡಿ 5 ಮಂಗಳವಾರ ರಂದು ನಡೆದ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಘಟಕ ಹಮ್ಮಿಕೊಂಡ ಬಾಬರಿ ಮಸೀದಿ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಈ ಹೇಳಿಕೆ ನೀಡಿದ್ದಾರೆ. ಇತಿಹಾಸದಲ್ಲಿ ಮೂವರು ಮಹಾತ್ಮರಾದ ಬುದ್ಧ, ಯೇಸು ಕ್ರಿಸ್ತ, ಮಹಮ್ಮದ್ ಪೈಗಂಬರ್ ಸೃಷ್ಟಿಗೆಗೆ ಮಾತ್ರ ದಾಖಲೆ ಮತ್ತು ಪುರಾವೆಗಳಿವೆ ಎಂದು ಅವರು ತಿಳಿಸಿದ್ದರು.ನಮ್ಮ ತಂದೆ ಹೆಸರು, ತಾತನ ಹೆಸರು ಹೇಳಬಹುದು, ಆದರೆ ತಾತನ ತಂದೆ ಬಗ್ಗೆ ಹೇಳಿ ಅಂದರೆ ಆಗುತ್ತಾ? ಅದೇ ರೀತಿ 9 ಲಕ್ಷ ವರ್ಷಗಳ ಹಿಂದೆ ಇದ್ದ ವ್ಯಕ್ತಿ ಬಗ್ಗೆ ಮಾತನಾಡುತ್ತಾರೆ ಎಂದರೆ ಏನು ಹೇಳಬೇಕು ಎಂದು ದ್ವಾರಕನಾಥ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಗೌತಮ ಬುದ್ಧ, ಜೀಸಸ್ ಹಾಗೂ ಪೈಗಂಬರ್ ಅವರ ಕಾಲಘಟ್ಟವನ್ನು ಗುರುತಿಸಬಹುದಾಗಿದೆ. ಇದು ಅವರ ಅಸ್ತಿತ್ವಕ್ಕೆ ಇರುವ ದಾಖಲೆ, ಇದನ್ನು ಹೊರತುಪಡಿಸಿದರೆ ಶ್ರೀರಾಮನ ಬಗ್ಗೆ ಅಂತಹ ಯಾವುದೇ ದಾಖಲೆ, ಪುರಾವೆ ಸಿಕ್ಕಿಲ್ಲ ಎಂದು ಹೇಳಿದರು.