ಕುಂದಾಪುರ, ಜೂ 19 (Daijiworld News/SM): ಕುಂದಾಪುರದಲ್ಲಿ ಕಳೆದ ಹಲವು ತಿಂಗಳುಗಳಿಂದ ಗೋಕಳ್ಳತನ ಹೆಚ್ಚುತ್ತಿದೆ ಎನ್ನುವ ಸುದ್ಧಿ ಹರಿದಾಡುತ್ತಿರುವಂತೆ ಇದೀಗ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿಯೂ ಸರಣಿ ಗೋ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ವಿಶೇಷವೆಂದರೆ ಎಲ್ಲಾ ಪ್ರಕರಣಗಳಲ್ಲಿಯೂ ಗೋವುಗಳನ್ನು ಕೊಟ್ಟಿಗೆಯಿಂದಲೇ ಕದ್ದೊಯ್ಯಲಾಗುತ್ತಿದ್ದು, ಇದುವರೆಗೂ ಆರೋಪಿಗಳನ್ನಾಗಲಿ, ಅಥವಾ ಗೋವುಗಳನ್ನಾಗಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಮಂಗಳವಾರ ರಾತ್ರಿ ಎಳಜಿತ್ ಪ್ರದೇಶದ ಕತ್ಲೆಹೊಳೆ ಭಾಗದಲ್ಲಿ ವಾಸವಿರುವ ಮಲ್ಲಿಮನೆ ಸದೆಯಮ್ಮ ಗೌಡ್ತಿ ಎಂಬುವರ ಹಟ್ಟಿಯಿಂದ ದನಗಳನ್ನು ಕದ್ದೊಯ್ಯಲಾಗಿದೆ. ಇವರ ಮನೆಯಲ್ಲಿ ಮಹಿಳೆಯರು ಮಾತ್ರವಿದ್ದು, ನಲವತ್ತು ಸಾವಿರ ರೂಪಾಯಿಗಳನ್ನು ಸಾಲ ಮಾಡಿ ಶಿಂಧಿ ದನ ಹಾಗೂ ಒಂದು ದೇಸೀ ತಳಿಯ ದನ ಸಾಕಿದ್ದರು. ಮಂಗಳವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಮಳೆ ಬರುತ್ತಿದ್ದ ಸಂದರ್ಭ ಐಷಾರಾಮಿ ಕಾರಿನಲ್ಲಿ ಬಂದು ದನಗಳನ್ನು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಕಾರಿನ ಚಕ್ರಗಳ ಅಚ್ಚು ಇರುವುದರಿಂದ ಗೋ ಕಳ್ಳರು ಐಷಾರಾಮಿ ವಾಹನ ಬಳಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇನ್ನು ಅಲ್ಲೇ ಸಮೀಪದ ಪಾರ್ವತಿ ಪೂಜಾರ್ತಿ ಎಂಬುವರ ಮನೆಯಲ್ಲಿ ಸಾಕಲಾಗಿದ್ದ ಮೂರು ದನಗಳನ್ನು ಖದೀಮರು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಮನೆಯವರು ಎದ್ದು ನೋಡುವಾಗ ಕೊಟ್ಟಿಗೆ ಖಾಲಿಯಾಗಿದ್ದು, ೬೦ ಸಾವಿರ ರೂಪಾಯಿ ಸಾಲ ಮಾಡಿ ಖರೀದಿಸಿದ್ದ ಗೋವುಗಳು ನಾಪತ್ತೆಯಾಗಿದ್ದು, ಹಸುಗಳನ್ನೇ ನಂಬಿದ್ದ ಕುಟುಂಬ ಕಂಗಾಲಾಗಿದೆ.
ಎರಡು ಮನೆಗಳಿಂದ ಗೋವುಗಳನ್ನು ಕದ್ದೊಯ್ದಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಂದೂರು ಬಿಜೆಪಿಯ ಯುವ ನಾಯಕ ಶರತ್ ಶೆಟ್ಟಿ ಉಪ್ಪುಂದ ಹಾಗೂ ಸ್ಥಳೀಯ ಭಜರಂಗದಳದ ಯುವಕರು ಈ ಸಂದರ್ಭ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಸಂದರ್ಭ ಹಾಜರಿದ್ದು, ಕಳವುಗೈಯಲಾದ ದನಗಳನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಆರೋಪಿಗಳನ್ನು ತಕ್ಷಣವೇ ಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.