ಮಂಗಳೂರು, ಜೂ 19 (Daijiworld News/MSP): 'ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಉದಯವಾಣಿ ' ಸಹಯೋಗದೊಂದಿಗೆ ಮಂಗಳೂರಿನ ಉರ್ವಸ್ಟೋರ್ ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ " ಮನೆ ಮನೆಗೆ ಮಳೆಕೊಯ್ಲು - ಜಲ ಸಾಕ್ಷರ" ಮಾಹಿತಿ ಶಿಬಿರವನ್ನು ಜೂನ್ ಬುಧವಾರ ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ಉದ್ಘಾಟಿಸಿದರು.
ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಜಲತಜ್ಞ ಶ್ರೀಪಡ್ರೆ ಜಲ ಸಂರಕ್ಷಣೆಯ ಮಹತ್ವ , ಅಂತರ್ಜಲವೃದ್ದಿ , ಭವಿಷ್ಯದಲ್ಲಿ ನೀರಿನ ಬವಣೆ ತಪ್ಪಿಸಲು ಯಾವೆಲ್ಲಾ ಕ್ರಮ ಕೈಗೊಳ್ಳಬಹುದು, ಮತ್ತು ಮಳೆಕೊಯ್ಲು ನಿಂದಾಗುವ ಪ್ರಯೋಜನದ ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಜಲಕ್ಷಾಮದ ವಸ್ತುಸ್ಥಿತಿ ಬಗ್ಗೆ ಎಚ್ಚೆತ್ತುಕೊಂಡು ಅದಕ್ಕೆ ಪರ್ಯಾಯವಾದ ಮಾರ್ಗೋಪಾಯಗಳನ್ನು ಹುಡುಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರು ತಮ್ಮ ಇತಿ ಮಿತಿಯೊಳಗೆ ಅತಿ ಕಡಿಮೆ ಖರ್ಚಿನಲ್ಲಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡರೆ ಅಂತರ್ಜಲ ವೃದ್ದಿಯಾಗುವ ಜತೆಗೆ ನೀರಿನ ಅಭಾವವೂ ನೀಗಿದಂತಾಗುತ್ತದೆ ಎಂದರು.
ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ್ ಕಾಮತ್, ದ,ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ದ.ಕ.ಜಿ.ಪಂ. ಸಿಇಒ ಡಾ.ಸೆಲ್ವಮಣಿ, ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೊಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.