ಮಂಗಳೂರು, ಜೂ19(Daijiworld News/SS): ಅಂತರಾಷ್ಟ್ರೀಯ ಮಟ್ಟದ ಸಾಹಸ ಕ್ರೀಡೆ ಹಾಗೂ ಪ್ರವಾಸಿ ಕೇಂದ್ರವಾಗಿ ಪ್ರಸಿದ್ಧಿ ಪಡೆಯುತ್ತಿರುವ ಸಸಿಹಿತ್ಲು ಮುಂಡ ಬೀಚ್ ಅಭಿವೃದ್ಧಿಯ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ, ಚಿಂತನೆಗಳು ನಡೆಯುತ್ತಿದೆ.
ಸಸಿಹಿತ್ಲು ಮುಂಡಾ ಬೀಚ್ ವೀಕ್ಷಿಸಿ ಮಾತನಾಡಿರುವ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಕರಾವಳಿಯ ಪ್ರವಾಸಿ ಕೇಂದ್ರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಳೆಯಂ ಗಡಿ ಗ್ರಾ. ಪಂ.ನ ಸಸಿಹಿತ್ಲು ಮುಂಡ ಬೀಚ್ ಅಭಿವೃದ್ಧಿಗೆ 7 ಕೋ. ರೂ. ವೆಚ್ಚದಲ್ಲಿ ನೀಲನಕ್ಷೆಯನ್ನು ತಯಾರಿಸಿ ಅದರ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದರು.
ಕರಾವಳಿಯ ಮಲ್ಪೆಯಿಂದ ತಲಪಾಡಿಯವರೆಗೆ ಇರುವ ಬೀಚ್ಗಳನ್ನು ವಿವಿಧ ಅನುದಾನ ಹಾಗೂ ಕೇಂದ್ರ ಸರಕಾರದ ಸಹಕಾರದಲ್ಲಿ ರಾಜ್ಯ ಸರಕಾರವು ಯೋಜನೆಗಳನ್ನು ರೂಪಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಕರಾವಳಿ ಭಾಗದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಟ್ಟದ ಸಾಹಸ ಕ್ರೀಡೆ ಹಾಗೂ ಪ್ರವಾಸಿ ಕೇಂದ್ರವಾಗಿ ಪ್ರಸಿದ್ದಿ ಪಡೆಯುತ್ತಿರುವ ಸಸಿಹಿತ್ಲು ಮುಂಡ ಬೀಚ್ ಅಭಿವೃದ್ಧಿಗೆ ಸುಮಾರು 7 ಕೊ.ರೂ. ವೆಚ್ಚದಲ್ಲಿ ನೀಲ ನಕ್ಷೆಯನ್ನು ತಯಾರಿಸಲಾಗಿದ್ದು ಸಮಗ್ರ ಅಧ್ಯಯನದ ಬಳಿಕ ಕಂದಾಯ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಜಮೀನು ಹಸ್ತಾಂತರ ನಡೆಯಲಿದೆ ಎಂದು ಹೇಳಿದ್ದಾರೆ.
ಬೀಚ್ ಅಭಿವೃದ್ಧಿಯ ಯೋಜನೆಗಳು ಮುಂದಿನ ಐವತ್ತು ವರ್ಷಕ್ಕಾಗುವಂತಹದ್ದಾಗಿರಬೇಕು. ಇದಕ್ಕೆ ಪೂರಕವಾಗಿ ಶಾಶ್ವತ ತಡೆಗೋಡೆ, ವಾಕಿಂಗ್ ಟ್ರಾಕ್ಗಳು, ವಿಹಂಗಮ ಪರಿಸರ, ಅಧುನಿಕ ಬೋಟಿಂಗ್, ಹಸುರು ಹೊದಿಕೆ, ಪ್ರವಾಸಿಗರಿಗೆ ಬೇಕಾದ ಮಾರಾಟ ಕೇಂದ್ರಗಳು, ಸಂಪರ್ಕ ರಸ್ತೆಗಳು ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಅಕ್ರಮ ಸಕ್ರಮ ಅರ್ಜಿಗಳಾದ 94 ಸಿಸಿ ಹಕ್ಕುಪತ್ರದ ವಿತರಣೆಯಲ್ಲಿ ಕೆಲವು ತಾಂತ್ರಿಕ ದೋಷಗಳಿಂದ ವಿತರಣೆ ತುಸು ಹಿನ್ನಡೆಯಾಗಿದೆ. ಕಂದಾಯ ಇಲಾಖೆ ಹಾಗೂ ಸಂಬಂಧಿತ ಇಲಾಖಾಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.