ಬಂಟ್ವಾಳ,ಜೂ18(DaijiworldNews/AZM): ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಪನೋಲಿಬೈಲ್ ಸಮೀಪದ ಕೋಮಾಲಿ ಎಂಬ ಊರಿನ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ಅಡಿಕೆ ಮರವೇರಲು ಬೈಕೊಂದನ್ನು ಆವಿಷ್ಕರಿಸಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಿಂದ ಅಡಿಕೆ ಕೀಳಲು, ಮರಕ್ಕೆ ಔಷಧಿ ಬಿಡಲು ಜನರೇ ಇಲ್ಲದಂತಾಗಿದೆ. ಆ ಕಾರಣಕ್ಕಾಗಿ ಇವರೇ ರೋಬೋಟ್ ಮಾದರಿಯನ್ನು ಅಧ್ಯಯನ ಮಾಡುವ ಸಂದರ್ಭ ಈ ಅಡಿಕೆ ಮರ ಏರುವ ಬೈಕ್ ಆವಿಷ್ಕಾರದ ಆಲೋಚನೆ ಹೊಳೆಯಿತಂತೆ. ಆ ಬಳಿಕ ಅವರು ಐದು ವರ್ಷಗಳ ಕಾಲ ನಡೆಸಿದ ಸತತ ಸಂಶೋಧನೆಯ ಫಲವಾಗಿ ಈಗಿರುವ ಬೈಕ್ನ ಮಾದರಿ ತಯಾರಾಯಿತು.
ಅಡಿಕೆ ಮರದ ಬುಡದಲ್ಲಿ ಬೈಕ್ನ್ನು ಇರಿಸಿ ಟಯರನ್ನು ಮರಕ್ಕೆ ಕಚ್ಚಿಸಿಕೊಂಡು ಸ್ಟಾರ್ಟ್ ಗುಂಡಿಯನ್ನು ಒತ್ತಿ, ಬಳಿಕ ಬ್ರೇಕ್, ಎಕ್ಸಲೇಟರ್ ಮಾದರಿಯ ಸಾಧನವನ್ನು ಒಟ್ಟಿಗೆ ಅದುಮಿದರೆ ನೇರವಾಗಿ ಬೈಕ್ ಕೇವಲ 30 ಸೆಕೆಂಡಿನಲ್ಲಿ ಮರದ ತುದಿಯಲ್ಲಿರುತ್ತದೆ. ಅದೇ ರೀತಿ ಕೇವಲ ಬ್ರೇಕ್ ಸಾಧನವನ್ನು ಅದುಮಿದರೆ ಸೀದಾ ಕೆಳಕ್ಕೆ ಬರುತ್ತದೆ. ಅಲ್ಲದೆ ಮರದ ತುದಿಯಲ್ಲಿ ಬ್ರೇಕ್, ಎಕ್ಸಲೇಟರ್ ಎರಡೂ ಮಾದರಿಯನ್ನು ಕೈ ಬಿಟ್ಟರೆ ಸ್ಟಿಲ್ ಆಗಿ ಮರದಲ್ಲಿ ನಿಲ್ಲುತ್ತದೆ. ವಿಶೇಷ ಅಂದರೆ ಪೆಟ್ರೋಲ್ ಚಾಲಿತ ಈ ಬೈಕ್ಗೆ ಕೇವಲ ಮರ ಹತ್ತಲು ಮಾತ್ರ ಪೆಟ್ರೋಲ್ ಬಳಕೆಯಾಗುತ್ತದೆ. ಕೆಳಗಿಳಿಯಲು ಹಾಗೂ ಮರದ ಮೇಲಿರುವ ಸಂದರ್ಭ ಯಾವುದೇ ರೀತಿ ಪೆಟ್ರೋಲ್ ಬಳಕೆಯಾಗುವುದಿಲ್ಲ.ಆದ್ದರಿಂದ ಒಂದು ಲೀಟರ್ ಪೆಟ್ರೋಲ್ಗೆ 80 ಅಡಿಕೆ ಮರ ಹತ್ತಲು ಸಾಧ್ಯ ಎಂದು ಗಣಪತಿ ಭಟ್ ಅವರು ಹೇಳುತ್ತಾರೆ.
ಅಡಿಕೆ ಮರವೇರುವುದೆಂದರೆ ಸೇಫ್ಟಿ ಅತ್ಯಗತ್ಯ. ಆದ್ದರಿಂದ ಸೇಫ್ಟಿ ಬೆಲ್ಟ್ ಕೂಡಾ ಇದ್ದು, ಮೇಲಿನಿಂದ ಬೀಳುವಂತಹ ಯಾವ ಭಯವೂ ಇಲ್ಲ. ಯಾಕೆಂದರೆ ಈ ಯಂತ್ರದಲ್ಲಿ ಎರಡೆರಡು ಸೇಫ್ಟಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಈ ಬೈಕ್ನ್ನು ಮಹಿಳೆಯರೂ ಚಲಾಯಿಸಬಹುದು, ಮಕ್ಕಳೂ ಚಲಾಯಿಸಬಹುದು. ಸ್ವತಃ ನನ್ನ ಮಗಳು ಸುಪ್ರಿಯಾಳೇ ಯಾವುದೇ ಭಯವಿಲ್ಲದೆ ಈ ಬೈಕ್ ಚಲಾಯಿಸುತ್ತಾಳೆ. ಈ ಬೈಕ್ ನಿರ್ಮಾಣಕ್ಕೆ ಸುಮಾರು 75 ಸಾವಿರ ರೂ. ವೆಚ್ಚ ತಗಲುತ್ತದೆ. ನಾನು ಹಣ ಮಾಡುವ ಉದ್ದೇಶದಿಂದ ಈ ಬೈಕ್ ಕಂಡುಹಿಡಿಯಲಿಲ್ಲ. ನನ್ನಂತಹ ಇತರ ಅಡಿಕೆ ಕೃಷಿಕರಿಗೆ ಇದರ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಆವಿಷ್ಕಾರ ಮಾಡಿದೆ ಎಂದು ಗಣಪತಿ ಭಟ್ ಅವರು ಸಂತಸದಿಂದ ಹೇಳುತ್ತಾರೆ.
ಅಡಿಕೆ ಮರ ಏರುವ ಬೈಕ್ ಮಾರ್ಕೆಟಿಂಗ್ ವ್ಯವಸ್ಥೆಯನ್ನು ವಹಿಸಿರುವ ರಾಜಾರಾಮ್ ಅವರು ಮಾತನಾಡಿ, ಇಂದಿನ ಪರಿಸ್ಥಿತಿಗೆ ಅಡಿಕೆ ಮರವೇರಲು ಇಂತಹ ಒಂದು ಯಂತ್ರವೊಂದರ ಅಗತ್ಯತೆ ಇತ್ತು. ಆದ್ದರಿಂದ ಗಣಪತಿ ಭಟ್ ಅವರು ಆವಿಷ್ಕರಿಸಿರುವ ಅಡಿಕೆ ಮರವೇರುವ ಬೈಕ್ ಇಂದಿನ ಕಾಲಕ್ಕೆ ಒಂದು ಮೈಲುಗಲ್ಲು ಆಗಿದೆ. ಕಳೆದು ಐದಾರು ವರ್ಷಗಳಿಂದ ಅನೇಕ ಮಾದರಿಯ ಹಲವಾರು ಯಂತ್ರಗಳು ಮಾರುಕಟ್ಟೆಗೆ ಬಂದಿತ್ತು. ಆದರೆ ಅಡಿಕೆ ಬೆಳೆಗಾರರ ಬೇಡಿಕೆ ಏನೆಂದರೆ ಯಂತ್ರದೊಂದಿಗೆ ಮನುಷ್ಯನೂ ಮರಹತ್ತಿ ಔಷಧಿ ಸಿಂಪಡಿಸುವಂತಾಗಬೇಕು. ಅಡಿಕೆ ಕೀಳುವಂತಾಗಬೇಕು. ಇದರಿಂದ ಮಾತ್ರ ಅಡಿಕೆ ಬೆಳೆಗಾರಿಗೆ ನೆಮ್ಮದಿ ಕಾಣಲು ಸಾಧ್ಯ ಎಂಬುದು. ಆದ್ದರಿಂದ ಈ ಬೈಕ್ ಕೃಷಿಕರಲ್ಲಿ ತಮ್ಮ ಬೆಳೆಯನ್ನು ತಮ್ಮ ಮನೆಯಂಗಳಕ್ಕೆ ಮುಟ್ಟಿಸುವ ಭರವಸೆ ಹುಟ್ಟಿಸಿದೆ ಎಂದು ಹೇಳಿದರು.
ಅಡಿಕೆ ಕೃಷಿಕ ಪ್ರವೀಣ್ ಪುತ್ತೂರು ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಡಿಕೆ ಮರವೇರುವ ಬೈಕ್ ಬಹಳ ಪ್ರಚಾರದಲ್ಲಿದ್ದು, ಬಹಳ ಆಸಕ್ತಿದಾಯಕವಾಗಿರುವುದರಿಂದ ನಾನು ಈ ಬೈಕ್ ನೋಡಲು ಬಂದಿದ್ದೇನೆ. ಅಡಿಕೆ ಕೃಷಿಕರ ಸಂಕಷ್ಟ ಮತ್ತೊಬ್ಬ ಅಡಿಕೆ ಕೃಷಿಕನಿಗೇ ತಿಳಿಯುವುದು. ಆ ನಿಟ್ಟಿನಲ್ಲಿ ಈ ಪ್ರಯತ್ನ ಶ್ಲಾಘನೀಯ. ಈ ಬೈಕ್ ನ್ನು ಗಮನಿಸಿದಾಗ, ತಯಾರಕ ಗಣಪತಿ ಭಟ್ ಅವರ ಶ್ರಮ ಬಹಳಷ್ಟಿದೆ. ಯಾಕೆಂದರೆ ಇದು ಅವರ ಬಹು ವರ್ಷಗಳ ಶ್ರಮದ ಫಲ ಇದು. ಇಷ್ಟರವರೆಗೆ ಯಾರೂ ಮಾಡದ ಪ್ರಯತ್ನವನ್ನು ಅವರು ಮಾಡಿದ್ದಾರೆ. ಎಲ್ಲಾ ಕೃಷಿಕರು ಈ ಯಂತ್ರದ ಪ್ರಯೋಜನ ಪಡೆಯಲೇಬೇಕು. ಕೃಷಿಕರು ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಮಾಡಿದರೆ ಗಣಪತಿ ಭಟ್ ರಿಂದ ಇದರಲ್ಲಿ ಇನ್ನೂ ಪ್ರಗತಿಯನ್ನು ನಾವು ಕಾಣಬಹುದು ಎಂದು ಹೇಳಿದರು.