ಬೆಳ್ತಂಗಡಿ, ಜೂ 18 (Daijiworld News/MSP): ಅದೊಂದು ದಟ್ಟ ಕಾನನದ ನಡುವೆ ಮನುಷ್ಯರ ವಾಸಸ್ಥಾನ. ಅಲ್ಲಿ ಶತಮಾನಗಳಿಂದ ವಿದ್ಯುತ್ ಸಂಪರ್ಕವಿಲ್ಲ. ದಿನವೂ ಚಿಮಿಣಿ ದೀಪವೇ ಅವರಿಗೆ ದೀಪಾವಳಿ ಸಂಭ್ರಮ. ಅಂತಹ ಪ್ರದೇಶಕ್ಕೆ ಶತಮಾನದ ಬಳಿಕ ವಿದ್ಯುತ್ ಸಂಪರ್ಕಗೊಂಡು ನಾಗರಿಕ ಸಮಾಜದ ದೀಪಾವಳಿ ಸಂಭ್ರಮ ಮನೆ ಮಾಡಿದೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದಟ್ಟ ಕಾನನದ ನಡುವೆ ಬಾಂಜಾರು ಮಲೆಕುಡಿಯ ಕಾಲೋನಿಯ 47 ಕುಟುಂಬಗಳು ಇದೀಗ ವಿದ್ಯುತ್ ಸಂಪರ್ಕದ ಸಂಭ್ರಮದಲ್ಲಿದೆ. ಈ ಕಾಲೋನಿಯ ಜನರು ಶತಮಾನಗಳಿಂದ ಮೂಲಭೂತ ಸೌಕರ್ಯಗಳ ಈಡೇರಿಸಲು ಜನಪ್ರತಿನಿಧಿಗಳಿಗೆ , ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಿದ ಅರ್ಜಿಗಳಿಗೆ ಲೆಕ್ಕವೇ ಇಲ್ಲ. ವಿದ್ಯುತ್ ಪೂರೈಕೆಗಾಗಿ ಹಲವಾರು ಯೋಜನೆಯಡಿ ಕಾಮಗಾರಿ ಮಂಜೂರುಗೊಂಡರೂ ಅರಣ್ಯ ಹಾಗೂ ಖಾಸಗಿ ಜಮೀನಿನ ಕಾರಣದಿಂದಾಗಿ ಸಾಧ್ಯವಾಗಲಿಲ್ಲ.
ವಿದ್ಯುತ್ ಪೂರೈಕೆ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಸೋಲಾರ್ ಪ್ಲಾಂಟ್ ಮಂಜೂರುಗೊಂಡರೂ ಸರ್ಕಾರಿ ಜಮೀನಿನ ಕೊರತೆಯಿಂದ ಅದೂ ಕೈಗೂಡಲಿಲ್ಲ. ಉಜಿರೆ , ಬೆಳ್ತಂಗಡಿ, ಬಂಟ್ವಾಳ , ಮಂಗಳೂರು ಮೆಸ್ಕಾಂ ಇಲಾಖೆ ಸೇರಿದಂತೆ ಬೆಂಗಳೂರು ವಿಧಾನಸೌಧದ ಬಾಗಿಲು ತಟ್ಟಿದರೂ ಯಾವುದೇ ಪ್ರಯೋಜನವಿಲ್ಲ. ಆದರೆ ಛಲ ಬಿಡದ ನಿರಂತರ ಪ್ರಯತ್ನ ಅಂತಿಮವಾಗಿ 47 ಮಲೆಕುಡಿಯ ಕುಟುಂಬಗಳು ವಿದ್ಯುತ್ ಸಂಪರ್ಕ ಕಾಣುವಂತಾಗಿದೆ.
ಮೊದಲ ಬಾರಿಗೆ ಬಾಂಜಾರು ಮಲೆಕುಡಿಯ ಕಾಲನಿಗೆ ಭೇಟಿ ನೀಡಿದ ದ.ಕ ಜಿಲ್ಲೆಯ ಜನಪ್ರಿಯ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರ ನಿರಂತರ ಪ್ರಯತ್ನದಿಂದಾಗಿ ಸುಮಾರು 2 ಕಿಲೋಮೀಟರ್ ರಸ್ತೆ ಕಾಂಕ್ರೀಟಿಕರಣವಾಗಿದೆ. ಎ.ಬಿ.ಇಬ್ರಾಹಿಂ ಅವರು ವಿದ್ಯುತ್ ಸಂಪರ್ಕಕ್ಕಾಗಿ ಹಲವಾರು ಬಾರಿ ಅಧಿಕಾರಿಗಳ ಸಭೆ ನಡೆಸಿ , ಸರ್ವೆ ನಡೆಸಿದರೂ ಸುಮಾರು 20- 21 ಕಿಲೋಮೀಟರ್ ದೂರ ವಿದ್ಯುತ್ ಕಂಬ ಅಳವಡಿಸಲು 1000 ಕ್ಕೂ ಹೆಚ್ಚು ಕಂಬಗಳು ಬೇಕಾಗಿರುವುದರಿಂದ ವಿದ್ಯುತ್ ಪೂರೈಕೆ ದೂರದ ಮಾತಗಿತ್ತು. ಆದರೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಸಮಿತಿ ಬಾಂಜಾರು ಮಲೆಕುಡಿಯ ಕಾಲನಿಗೆ ಹೇಗಾದರೂ ಮಾಡಿ ವಿದ್ಯುತ್ ಸಂಪರ್ಕಕ್ಕಾಗಿ ಕಾಲೋನಿಯ ಯುವಕರ ಜೊತೆ ನಿರಂತರ ಶ್ರಮಿಸಿತು. ಅದರ ಭಾಗವಾಗಿ ನೆರಿಯ ಗ್ರಾಮದ ಜೋರ್ಡಾನ್ ಕಂಪನಿ (ಲಿ) ಹಾಗೂ ಯೇನಪೋಯ ಕಂಪನಿ (ಲಿ) ಮಾಲೀಕರ ಜೊತೆಗೆ ನಿರಂತರ ಮಾತುಕತೆ ನಡೆಸಿ , ಒಪ್ಪಿಗೆ ಪತ್ರ ಪಡೆದುಕೊಂಡಿತು. ಅದರ ಫಲವಾಗಿ ಮೆಸ್ಕಾಂ ಸರ್ವೆ ನಡೆಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ನೀಡಿತು.
ಸೌಭಾಗ್ಯದ ವಿದ್ಯುತ್:
ಮಹತ್ವಾಕಾಂಕ್ಷೆಯ ಸೌಭಾಗ್ಯ ಯೋಜನೆಯಡಿಯಲ್ಲಿ ಬಾಂಜಾರು ಮಲೆಕುಡಿಯ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆ ಮೂಲಕ 47 ಕುಟುಂಬಗಳಲ್ಲಿ ಸೌಭಾಗ್ಯದ ಬೆಳಕು ಚೆಲ್ಲುವ ಕೆಲಸ ಸಂಪೂರ್ಣಗೊಂಡಿದೆ. ಖಾಸಗಿ ಜಮೀನಿನ ಮೂಲಕ ಯಾವುದೇ ಮರ ಕಡಿಯದೆ ವಿದ್ಯುತ್ ಸಂಪರ್ಕ ನಡೆಸಲಾಗಿದೆ. ಅರಣ್ಯ ಇಲಾಖೆಯ ಅಸಹಕಾರದ ನಡುವೆಯೂ ಖಾಸಗಿ ಎಸ್ಟೇಟ್ ಗಳ ಸಹಕಾರದಿಂದ ಸೌಭಾಗ್ಯದ ಬಾಗಿಲು ತೆರೆಯಿತು.
3 ವಿದ್ಯುತ್ ಪರಿವರ್ತಕಗಳು, 436 ಕಂಬಗಳು, 1.2ಕೋಟಿ ರೂಪಾಯಿ
ಬಾಂಜಾರು ವಿದ್ಯುತ್ ಸಂಪರ್ಕಕ್ಕಾಗಿ ಸೌಭಾಗ್ಯ ಯೋಜನೆಯಡಿ 1.2 ಕೋಟಿ ರೂಪಾಯಿ ವೆಚ್ಚದಲ್ಲಿ 25 ಕೆವಿ ಸಾಮರ್ಥ್ಯದ 3 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ. 6.4 ಕಿಲೋಮೀಟರ್ ದೂರ ಹೈಟೆನ್ಶನ್ ವಿದ್ಯುತ್ ಲೈನ್ ಹಾಗೂ 5.3 ಕಿಲೋಮೀಟರ್ ದೂರ ಲೋ ಟೆನ್ಶನ್ ಲೈನ್ ತಂತಿ ಎಳೆಯಲಾಗಿದೆ. ಸುಮಾರು 436 ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಕಾಮಗಾರಿಯನ್ನು ಮಂಗಳೂರಿನ ಜ್ಯೋತಿ ಎಲೆಕ್ಟ್ರಿಕಲ್ಸ್ ಕಂಪನಿ ನಿರ್ವಹಿಸಿದೆ. ಇದು ಬೆಳ್ತಂಗಡಿ ತಾಲೂಕಿನ ಆದಿವಾಸಿ ಸಮುದಾಯದ ಕಾಲನಿಗೆ ಪೂರೈಕೆ ಮಾಡಲಾದ ಅತಿ ದೊಡ್ಡ ವಿದ್ಯುತ್ ಸಂಪರ್ಕವಾಗಿದೆ.
ಬಾಂಜಾರು ಮಲೆಕುಡಿಯ ಕಾಲನಿಗೆ ಈ ಹಿಂದೆ ಚಾರ್ಮಾಡಿ ಗ್ರಾಮದ ಚಾರ್ಮಾಡಿಯಿಂದ ಘಾಟ್ ಪ್ರದೇಶದ ಮೂಲಕ 9 ನೇ ತಿರುವು ಮೂಲಕ ಅರಣ್ಯ ಪ್ರದೇಶ ದಾಟಿ ಯೆನಪೋಯ ಎಸ್ಟೇಟ್ ಮೂಲಕ ಸುಮಾರು 20-21 ಕಿಲೋಮೀಟರ್ ದೂರ ವಿದ್ಯುತ್ ಸಂಪರ್ಕಕ್ಕಾಗಿ ಸರ್ವೆ ನಡೆಸಲಾಗಿತ್ತು. ಇದೀಗ 12 ಕಿಲೋಮೀಟರ್ ಉದ್ದದಲ್ಲಿ ನೆರಿಯ ಗ್ರಾಮದ ಜೋರ್ಡಾನ್ ಎಸ್ಟೇಟ್ ಮೂಲಕ ಯೆನಪೋಯ ಎಸ್ಟೇಟ್ ದಾಟಿ ಬಾಂಜಾರು ಮಲೆಕುಡಿಯ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಬಾಂಜಾರು ಮಲೆಕುಡಿಯ ಕಾಲನಿಗೆ ವಿದ್ಯುತ್ ಸಂಪರ್ಕದ ಹಿಂದೆ ಉಜಿರೆ ಮೆಸ್ಕಾಂ ಎಇ ಕೃಷ್ಣೆಗೌಡ ಹಾಗೂ ತಂಡದ ಪರಿಶ್ರಮ ಅನನ್ಯವಾದುದು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ನಿರಂತರ ಭೇಟಿ ನೀಡಿ ಸಲಹೆ, ಸೂಚನೆ ನೀಡುತ್ತಿದ್ದರು. ಜೊತೆಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಅಧ್ಯಕ್ಷ ವಸಂತ ನಡ , ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ , ಸಾಮಾಜಿಕ ಕಾರ್ಯಕರ್ತ ರಾಜೇಶ್ ಭಟ್ ಸವಣಾಲು , ನ್ಯಾಯವಾದಿ ಕಿರಣ್ ಕುಮಾರ್ ಸವಣಾಲು , ಯೆನಪೋಯ , ಜೋರ್ಡಾನ್ ಎಸ್ಟೇಟ್ ಮಾಲಿಕರು , ಮಾಜಿ ಶಾಸಕ ವಸಂತ ಬಂಗೇರ ಅವರ ನಿರಂತರ ಸಹಾಯ, ಸಹಕಾರವನ್ನು ಕಾಲನಿಯ ನಿವಾಸಿಗಳು ಸ್ಮರಿಸುತ್ತಾರೆ.
ಸೌಭಾಗ್ಯ ಯೋಜನೆಯಡಿ 1.2 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.ಹಲವಾರು ವರ್ಷಗಳ ಬೇಡಿಕೆ ಈಡೇರಿದೆ. ಹಲವಾರು ಯೋಜನೆಗಳಲ್ಲಿ ಮಂಜೂರುಗೊಂಡರೂ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಸಾಕಷ್ಟು ಹಿನ್ನಡೆಯಾಗಿತ್ತು. ಇದೀಗ ಸೌಭಾಗ್ಯದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. -ಶಿವಶಂಕರ್ ಎಇಇ ಮೆಸ್ಕಾಂ ಬೆಳ್ತಂಗಡಿ
ನಮ್ಮ ಕಾಲನಿಯಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳ ನಿರಂತರ ಪ್ರಯತ್ನ , ಖಾಸಗಿ ಎಸ್ಟೇಟ್ ಗಳ ಸಹಕಾರ ಹಾಗೂ ಮಾಜಿ ಶಾಸಕ ವಸಂತ ಬಂಗೇರರ ಶ್ರಮದಿಂದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ನಮ್ಮ ಮನ,ಮನೆಗಳಲ್ಲಿ ಇದು ಅತ್ಯಂತ ಸಂಭ್ರಮ, ಸಂತೋಷದ ವಿಚಾರ. ನಮ್ಮ ಕಾಲನಿ ಚಿಮಿಣಿ ದೀಪದಿಂದ ಮುಕ್ತಿ ಹೊಂದಲು ಸಹಾಯ, ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು. - ಮೀನಾಕ್ಷಿ ಬಾಂಜಾರು ಗ್ರಾ.ಪಂಚಾಯತ್ ಸದಸ್ಯೆ