ಮೂಡುಬಿದಿರೆ,ಜೂ 18 (Daijiworld News/MSP): ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ರೂಪಾಯಿ 10 ಲಕ್ಷ ಅನುದಾನದಲ್ಲಿ ಮೂಡುಬಿದಿರೆ ಪೇಟೆಯಲ್ಲಿ 500 ಮೀಟರ್ ಒಳಗಡೆ ಅನುಷ್ಠಾನಗೊಂಡಿರುವ ಉಚಿತ ವೈಫೈ ಸೇವೆಯನ್ನು ಮಂಗಳವಾರ ಉದ್ಘಾಟಿಸಲಾಯಿತು.
ಶಾಸಕ ಕೆ.ಉಮಾನಾಥ ಕೋಟ್ಯಾನ್ ಸೇವೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಮೂಡುಬಿದಿರೆ ತಾಲೂಕು ಅನ್ನು ಮಾದರಿ ತಾಲೂಕು ಆಗಿ ಅಭಿವೃದ್ಧಿಪಡಿಸುವ ಇಚ್ಛೆ ಇದೆ. ವಿಧಾನಸಭಾ ಕ್ಷೇತ್ರದ ಯುವಕರು, ವ್ಯಾಪಾರಿಗಳಿಗೆ, ವಿದ್ಯಾರ್ಥಿಗಳಿಗೆ ಸಹಿತ ಜನರಿಗೆ ಅನುಕೂಲವಾಗುವಂತೆ ಮೂಡುಬಿದಿರೆ, ಬಜ್ಪೆ ಹಾಗೂ ಮೂಲ್ಕಿ ನಗರದಲ್ಲಿ ಒಟ್ಟು ರೂಪಾಯಿ 10 ಲಕ್ಷ ಅನುದಾನದಲ್ಲಿ ಸೇವೆ ಪ್ರಾರಂಭಿಸಿದ್ದೇವೆ. ಮೂಡುಬಿದಿರೆ ನಗರದಲ್ಲಿ 5 ಕಡೆ ವೈಫೈ ಪಾಯಿಂಟ್ಗಳನ್ನು ಹಾಕಲಾಗಿದೆ. ಈಗಾಗಲೇ ಬಸ್ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ ಪ್ರಾರಂಭಿಸಿ ಜನರ ಮೆಚ್ಚುಗೆ ಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಬಸ್ ನಿಲ್ದಾಣವನ್ನು ಸುಸಜ್ಜಿತ ಬಸ್ನಿಲ್ದಾಣ ಮಾಡುವ ಕನಸಿದೆ. ಅದಕ್ಕೆ ಸಂಬಂಧಪಟ್ಟಂತೆ ನೀಲಿ ನಕಾಶೆಯನ್ನು ತಯಾರಿಸಲು ಸೂಚನೆ ನೀಡಲಾಗಿದೆ ಎಂದರು.
ಬಿಎಸ್ಎನ್ಎಲ್ ಮಾರ್ಕೆಟಿಂಗ್ ವಿಭಾಗದ ಪ್ರಬಂಧಕ ತೇಜಸ್ ವೈಫೈ ಬಗ್ಗೆ ಮಾಹಿತಿ ನೀಡಿ, ಮೊಬೈಲ್ ಸೆಟ್ಟಿಂಗ್ನಲ್ಲಿ ವೈಫೈ ಆಪ್ಷನ್ಗೆ ಕ್ಲಿಕ್ ಮಾಡಿದಾಗ ‘ಬಿಎಸ್ಎನ್ಎಲ್ ಉಮಾನಾಥ ಕೋಟ್ಯಾನ್ ಫ್ರೀ ವೈಫೈ’ ಅಂತ ಬರುತ್ತದೆ. ಅದನ್ನು ಕ್ಲಿಕ್ ಆದ ಕೂಡಲೆ ಕ್ಯಾಪ್ಟಿ ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೊಬೈಲ್ ನಂಬರ್ ನಮೂದಿಸಿದಾಗ ಒಟಿಪಿ ಬರುತ್ತದೆ. ಅದನ್ನು ಭರ್ತಿಗೊಳಿಸಿದಾಗ ಉಚಿತ ವೈಫೈ ಸೇವೆಯನ್ನು ಪಡೆಯಬಹುದು. 10 ಎಂಬಿಪಿಎಸ್ ವೇಗದಲ್ಲಿ ಒಂದು ಗಂಟೆಗೆ ಪ್ರತಿಯೊಬ್ಬರು ಇಂಟರ್ನೆಟ್ ಬಳಸಹುದಾಗಿದೆ. ಮೊಬೈಲ್, ಟ್ಯಾಬ್ ಹಾಗೂ ಲ್ಯಾಪ್ಟಾಪ್ಗಳಲ್ಲಿ ವೈಫೈ ಸೇವೆ ಪಡೆಯಬಹುದು ಎಂದರು.
ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭೆ ಸದಸ್ಯರಾದ ನಾಗರಾಜ ಪೂಜಾರಿ, ಶ್ವೇತಾ ಕುಮಾರಿ, ರಾಜೇಶ್ ನಾಕ್, ಸೌಮ್ಯ ಸಂದೀಪ್ ಶೆಟ್ಟಿ, ದಿವ್ಯಾ ಜಗದೀಶ್, ಕುಶಲ ಯಶೋಧರ ದೇವಾಡಿಗ, ಜಯಶ್ರೀ ಕೇಶವ್, ಪುತ್ತಿಗೆ ಗ್ರಾ.ಪಂ ಸದಸ್ಯ ಶಶಿಧರ ಅಂಚನ್, ಹೊಸಬೆಟ್ಟು ಗ್ರಾ.ಪಂ ಸದಸ್ಯ ಸತೀಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಸುದರ್ಶನ್.ಎಂ, ಮುಖಂಡರಾದ ಮೇಘನಾಥ್ ಶೆಟ್ಟಿ, ರಾಜೇಶ್ ಮಲ್ಯ, ಹರೀಶ್ ಎಂ.ಕೆ, ಶಾಂತಿ ಪ್ರಸಾದ್ ಹೆಗ್ಡೆ, ರಂಜಿತ್ ಪೂಜಾರಿ, ರಾಹುಲ್ ಉಪಸ್ಥಿತರಿದ್ದರು.