ವಿಟ್ಲ ಡಿ 5 : ಇಲ್ಲಿನ ಕೇಪು ಗ್ರಾಮದ ಕಲ್ಲಂಗಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ೧೩ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಮಕ್ಕಳ ಲೋಕ ನಡೆಯಿತು. ಕೇಪು ದೈವಸ್ಥಾನದ ದ್ವಾರದಿಂದ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಳಿಕೆ ವಿದ್ಯಾಸಂಸ್ಥೆಯ ಬ್ಯಾಂಡ್ ಗಮನ ಸೆಳೆಯಿತು.ಫಾತಿಮತ್ ತಬ್ಶೀರ ಸಮ್ಮೇಳನ ಉದ್ಘಾಟಿಸಿದರು. ಬಂಟ್ವಾಳ ತಾ| ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ಆಶಯ ನುಡಿಗಳನ್ನಾಡಿದರು. ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಮಕ್ಕಳ ಕೃತಿಗಳನ್ನು ಬಿಡುಗಡೆಗೊಳಿಸಿದರು. ಕೇಪು ಗ್ರಾ.ಪಂ.ಅಧ್ಯಕ್ಷ ತಾರಾನಾಥ ಆಳ್ವ ಮೆರವಣಿಗೆ ಉದ್ಘಾಟಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಅಬ್ದುಲ್ಕರೀಂ ಕುದ್ದುಪದವು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೇಪು ಕಲ್ಲಂಗಳ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯಶಸ್ವಿ ಮಾತನಾಡಿ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಸಾಹಿತ್ಯ ಕೆಲಸ ಮಾಡುತ್ತದೆ. ಎಲ್ಲ ಅನ್ವೇಷಣೆಗಳು, ಸಂಶೋಧನೆಗಳು, ಹುಡುಕಾಟಗಳು, ಅನುಭವಗಳು, ಕಂಡು ಕೊಂಡ ಸತ್ಯಗಳು, ಮಾನವ ಬೆಳೆದು ಬಂದ ರೀತಿಗಳು ದಾಖಲೆಗಳಾಗಿ ಉಳಿಯಲು ಭಾಷೆ ಮತ್ತು ಸಾಹಿತ್ಯ ಬೇಕು. ಇಂದಿನ ಮತ್ತು ಹಿಂದಿನ ದಿನಮಾನಗಳಿಗೆ, ಜನಮಾನಗಳಿಗೆ ಸೇತುವಾಗಿ ಸಾಹಿತ್ಯ ನಿಂತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವಿದ್ಯಾರ್ಥಿ ವಿಶ್ವಜಿತ್, ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಮಾರ್ಗದರ್ಶಕರೂ ಆದ ವಿಟ್ಲ ಸುಬ್ರಾಯ ಪೈ, ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್, ಪ್ರಧಾನ ಕಾರ್ಯದರ್ಶಿ ಮಾಲತಿ ಕಾಂತಡ್ಕ, ಕಾರ್ಯದರ್ಶಿ ರಮೇಶ್ ಎಂ.ಬಾಯಾರು, ಸಾತ್ವಿಕ್ ವಿ.ನಾಯಕ್, ಅಮೃತಲಕ್ಷ್ಮೀ, ಮಕ್ಕಳ ಲೋಕದ ಭಾಸ್ಕರ ಅಟ್ವಳ, ಪ್ರಾ.ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಶೆಟ್ಟಿ ಪಡಿಬಾಗಿಲು, ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಕೆ.ಜಿ., ವಿಶ್ವನಾಥ ಗೌಡ, ಆಯಿಷತ್ ರಿಯಾನ ಉಪಸ್ಥಿತರಿದ್ದರು.