ಉಳ್ಳಾಲ, ಏ.17(DaijiworldNews/TA): ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದಲ್ಲಿ ಗಾಯಗಳ ಗುರುತು ಪತ್ತೆಯಾಗಿವೆ. ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಶಂಕಿಸಿರುವ ಉಳ್ಳಾಲ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ.

ಬೇರೆ ರಾಜ್ಯದವರೆಂದು ವರದಿಯಾಗಿರುವ ಸಂತ್ರಸ್ತೆ ತಡರಾತ್ರಿ ಕುಡಿದ ಅಮಲಿನಲ್ಲಿ ಸ್ಥಳೀಯ ನಿವಾಸವೊಂದರ ಬಾಗಿಲು ತಟ್ಟುತ್ತಿದ್ದಾಗ ಪತ್ತೆಯಾಗಿದ್ದಾಳೆ. ನೀರು ಕೇಳುತ್ತಿದ್ದಾಗ ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ನಿವಾಸಿಗಳು ತಕ್ಷಣ 112 ಗೆ ಕರೆ ಮಾಡುವ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಮೂಲಗಳ ಪ್ರಕಾರ, ಆಕೆಗೆ ಮದ್ಯದ ಅಮಲಿನಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ ಮತ್ತು ಆಕೆಯ ದೇಹದ ಮೇಲೆ ಹಲವಾರು ಗಾಯಗಳ ಗುರುತುಗಳಿದ್ದವು.
ಈ ಪ್ರದೇಶದಲ್ಲಿ ಒಂದು ಪಾಳುಬಿದ್ದ ಮನೆ ಇದೆ ಎಂದು ವರದಿಯಾಗಿದೆ. ಮತ್ತು ಇದು ತಡರಾತ್ರಿಯಲ್ಲಿ ಆಗಾಗ್ಗೆ ಮಾದಕ ವ್ಯಸನಿಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ. ಘಟನೆಯ ರಾತ್ರಿ, ನಾಲ್ವರು ವ್ಯಕ್ತಿಗಳ ಗುಂಪು ಅಲ್ಲಿ ಕಂಡುಬಂದಿತ್ತು ಎನ್ನಲಾಗಿದೆ. ಆದರೆ, ಮಹಿಳೆ ಪಕ್ಕದ ಮನೆಯ ಬಳಿ ಬಂದಾಗ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಆದರೆ, ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾರಣ ಅವರು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.