ಬಂಟ್ವಾಳ, ಏ.17(DaijiworldNews/TA): ಫರಂಗಿಪೇಟೆಯ ಅರ್ಕುಳ ಭಾಗದಲ್ಲಿ ರಸ್ತೆಬದಿಯಲ್ಲೇ ಕಸ ತ್ಯಾಜ್ಯಗಳನ್ನು ಎಸೆಯಲಾಗುತ್ತಿದ್ದು, ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ತ್ಯಾಜ್ಯವನ್ನು ಹಾಕಲು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಇದ್ದರೂ ವಾಹನಗಳಲ್ಲಿ ಬರುವವರು ಈ ಭಾಗದಲ್ಲಿ ಕಸ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ.

ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಎಸೆಯುವ ಪ್ಲಾಸ್ಟಿಕ್ ಸೇರಿದ ವಿವಿಧ ರೀತಿಯ ತ್ಯಾಜ್ಯ ವಸ್ತುಗಳನ್ನು ದನ ಕರುಗಳ ತಿನ್ನುತ್ತಿದ್ದು, ಅವುಗಳ ಜೀವಕ್ಕೂ ಕಂಟಕವಾಗಿ ಪರಿಣಮಿಸುತ್ತಿದೆ. ಇನ್ನು ಈ ಪರಿಸರದಲ್ಲಿ ಹೆಲ್ತ್ ಸೆಂಟರ್ ಕೂಡ ಕಾರ್ಯಾಚರಿಸುತ್ತಿದ್ದು, ಬೇಕಾಬಿಟ್ಟಿಯಾಗಿ ಕಸ ಎಸೆದು ಹೋಗುತ್ತಿರುವುದರಿಂದ ಸ್ಥಳೀಯ ಜನರ ಆರೋಗ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಇಲಾಖೆ ರಸ್ತೆಬದಿಯಲ್ಲೇ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.