ಮಂಗಳೂರು, ಜೂ 17 (Daijiworld News/SM): ಕರಾವಳಿ ಜಿಲ್ಲೆಯ ಜನತೆಯ ವಿರೋಧದ ನಡುವೆಯೂ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಗೆ ಪರಿಸರ ಪ್ರೇಮಿಗಳ ವಿರೋಧ ಕೂಡ ತೀವ್ರವಾಗಿದೆ. ಇದೀಗ ಮಾರಕವಾಗಿರುವ ಎತ್ತಿನಹೊಳೆ ಯೋಜನೆಯ ಪರವಾಗಿ ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿದ್ದು, ಪರಿಸರ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಹಿನ್ನೆಲೆಯಲ್ಲಿ ಹಸಿರು ಪೀಠದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಪರಿಸರವಾದಿಗಳು ನಿರ್ಧಾರ ಕೈಗೊಂಡಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಇದಕ್ಕಾಗಿ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಲಾಗುತ್ತಿದೆ. ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಹಸಿರು ಪೀಠದ ವಿರುದ್ಧ ದಾವೆ ಹೂಡಲು ಪರಿಸರ ಪ್ರೇಮಿಗಳು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಇನ್ನು ಎತ್ತಿನಹೊಳೆ ಯೋಜನೆ ಪಶ್ಚಿಮಘಟ್ಟ, ಕರಾವಳಿ ಮಲೆನಾಡು ಪ್ರದೇಶಗಳಿಗೆ ಮಾರಕವಾಗಿದೆ. ಯೋಜನೆಗೆ ಅನುಮೋದನೆ ನೀಡಿರುವ ಅರಣ್ಯ ಇಲಾಖೆಯ ಕ್ರಮ ಪ್ರಶ್ನಿಸಿ ರಾಷ್ಟ್ರೀಯ ಹಸಿರುಪೀಠಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಮೇ 24ರಂದು ವಜಾಗೊಳಿಸಲಾಗಿತ್ತು. ಇದು ಪರಿಸರವಾದಿಗಳಿಗೆ ತೀವ್ರ ಅಸಮಾಧಾನವನ್ನುಂಟು ಮಾಡಿದ್ದು ಇದೇ ಕಾರಣಕ್ಕೆ ಪರಿಸರ ಪ್ರೀಯರು ಹೋರಾಟಕ್ಕೆ ಮುಂದಾಗಿದ್ದಾರೆ.
ಇನ್ನು ಈ ನಡುವೆ ರಾಜ್ಯ ಸರಕಾರ ಯೋಜನೆಯ ಪರವಾಗಿ ವಾದ ಮಂಡಿಸಿದೆ. ಇದೊಂದು ಕುದಿಯುವ ನೀರಿನ ಯೋಜನೆಯಾಗಿದೆ ಎಂದು ವಾದಿಸಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದ್ದು, ಯಾವುದೇ ಕಾರಣಕ್ಕೆ ಇತರ ಉದ್ದೇಶಗಳಿಗೆ ನೀರನ್ನು ಬಳಸುವುದಿಲ್ಲ ಎಂದು ತಿಳಿಸಿದೆ.