ಗಾಜಿಯಾಬಾದ್ ಡಿ 5 : ಹೆಣ್ಣು ಬ್ರೂಣ ಹತ್ಯೆಯನ್ನು ಸರ್ಕಾರ ನಿಷೇಧಿಸಿದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಇಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆ ಗಾಜಿಯಾಬಾದ್ ನಲ್ಲಿ ನಡೆದ ಘಟನೆ. ಗಂಡು ಮಗುವಿನ ಆಸೆಗೆ ಮೂರು ತಿಂಗಳ ಪುಟ್ಟ ಹಸುಳೆಯನ್ನು ತಾಯೀಯೇ ತನ್ನ ಕೈಯ್ಯಾರೇ ಕ್ರೂರವಾಗಿ ಕೊಲೆಗೈದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಗಂಡು ಮಗುವಿನ ಆಸೆ ಹೊಂದಿದ್ದ 22 ವರ್ಷದ ಅರತಿ ಎನ್ನುವ ಮಹಿಳೆಗೆ ಹುಟ್ಟಿದ್ದು ಹೆಣ್ಣು ಮಗು. ಅದು ಹೇಗೂ ಮೂರು ತಿಂಗಳವರೆಗೆ ಸಹಿಸಿಕೊಂಡಿದ್ದಳೋ ಗೊತ್ತಿಲ್ಲ. ಡಿ 3 ರ ಭಾನುವಾರ ಮಗುವನ್ನು ದಿಂಬಿನಿಂದ ಮುಚ್ಚಿ ಬಳಿಕ ವಾಷಿಂಗ್ ಮೆಷಿನ್ ಗೆ ತುರುಕಿದ್ದಾಳೆ. ನಂತರ ತನ್ನ ಮಗುವನ್ನು ಯಾರೋ ಅಪಹರಣ ಮಾಡಿದ್ದಾರೆ ಅಂತ ನಾಟಕವಾಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅದರಂತೆ ಪೊಲೀಸರು ತನಿಖೆ ಆರಂಭಿಸಿದಾಗ ಆಕೆಯ ನಡವಳಿಕೆಯ ಬಗ್ಗೆಯೇ ಅನುಮಾನ ಮೂಡಿದ್ದು ಬಳಿಕ ವಿಚಾರಣೆ ವೇಳೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ. ಇನ್ನು ಈಕೆಯ ಮನೆಯವನ್ನು ವಿಚಾರಿಸಿದಾಗ ಗಂಡು ಮಗು ಬೇಕು ಅಂತಾ ನಾವು ಆಕೆಗೆ ಕಿರುಕುಳ ಅಥವಾ ಬೆದರಿಕೆ ಹಾಕಿಲ್ಲ. ಆಕೆಯೇ ಬೇಕೆಂದೆ ಮುದ್ದಾದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ ಅಂತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಎಳೆಗೂಸನ್ನು ಕೊಂದ ಘಟನೆ ಈಗ ಗಾಜಿಯಾಬಾದ್ ನ್ನು ಬೆಚ್ಚಿಬೀಳಿಸಿದೆ.