ಮಂಗಳೂರು, ಜೂ 17(Daijiworld News/MSP): ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ, ವಿವಿಧ ಭೇಡಿಕೆ ಮತ್ತು ಆರೋಗ್ಯ ಸಂಸ್ಥೆಗಳ ಮೇಲಿನ ದಾಳಿ ತಡೆಯಲು ಕಾಯ್ದೆ ರೂಪಿಸುವಂತೆ ಆಗ್ರಹಿಸಿ, ಭಾರತೀಯ ವೈದ್ಯಕೀಯ ಸಂಘಟನೆ ನೀಡಿರುವ ದೇಶವ್ಯಾಪಿ ಮುಷ್ಕರದ ಕರೆಗೆ ದೇಶಾದ್ಯಾಂತ ರೋಗಿಗಳು ಪರದಾಡುವಂತಾಗಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಳಗ್ಗೆ 6 ರಿಂದ ಜೂ 18 ರ ಬೆಳಗ್ಗೆ 6 ರವರೆಗೆ ಹೊರರೋಗಿ ಸೇವೆ ಬಂದ್ ಮಾಡಿದ್ದು, ರಾಜ್ಯದ ಹಲವೆಡೆ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.
ಮಂಗಳೂರಿನ ಅತ್ತಾವರ ಬಳಿ ಇರುವ ಐಎಂ ಎ ಸಭಾಂಗಣದಲ್ಲಿ ಖಾಸಗಿ ವೈದ್ಯರಿಂದ ಸಭೆ
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸೋಮವಾರ ವೈದ್ಯರು ತಮ್ಮ ಕ್ಲಿನಿಕ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ನಗರದ ಸರಕಾರಿ ಆಸ್ಪತ್ರೆಗಳಲ್ಲಿ ಜನಜಂಗುಳಿ ಹೆಚ್ಚಿತ್ತು. ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆಗಳಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿದ ಕಾರಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಔಷಧಕ್ಕೆ ಗಂಟೆ ಗಟ್ಟಲೆ ಕಾಯಬೇಕಾಗಿ ಬಂತು.
ಭಾರತೀಯ ವೈದ್ಯಕೀಯ ಸಂಘಟನೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ವತಿಯಿಂದ ಜಿಲ್ಲೆಯಲ್ಲೂ ಈ ಮುಷ್ಕರ ನಡೆಯುತ್ತಿದೆ. ಮುಷ್ಕರ ನಿರತ ವೈದ್ಯರೆಲ್ಲ ಪ್ರಸ್ತುತ ಮಂಗಳೂರಿನ ಅತ್ತಾವರ ಬಳಿ ಇರುವ ಐಎಂಎ ಸಭಾಂಗಣದಲ್ಲಿ ಮೂರನೇ ಮಹಡಿಯಲ್ಲಿ ಸಭೆ ಸೇರಿದ್ದಾರೆ.
ಪಶ್ಚಿಮಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಐಎಂಎ ಸೋಮವಾರ ದೇಶಾದ್ಯಂತ ತುರ್ತು ಸೇವೆಯನ್ನು ಹೊರತುಪಡಿಸಿ ಒಪಿಡಿ ಸೇರಿದಂತೆ ಎಲ್ಲಾ ಪ್ರಮುಖ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುವಂತೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ವೈದ್ಯರು ಮುಷ್ಕರಕ್ಕೆ ಬೆಂಬಲ ಘೋಷಿಸಿದ್ದರು.
ಖಾಸಗಿ ವೈದ್ಯರು, ಆಸ್ಪತ್ರೆಗಳು ಮುಷ್ಕರ ನಡೆಸುವುದರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸೇವೆಗೆ ಹೆಚ್ಚು ಗಮನಹರಿಸಲಾಗಿದೆ. ಖಾಸಗಿ ವೈದ್ಯರು ಮುಷ್ಕರ ನಡೆಸುವುದರಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರೋದ್ರಿಂದ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಲು ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಆರೋಗ್ಯ ಇಲಾಖೆಯ ನಿರ್ದೇಶಕರು ಆಯಾ ಜಿಲ್ಲಾ ಸರ್ಜನ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ.