ಬೆಳಗಾವಿ ಡಿ 5: ವರದಕ್ಷಿಣೆ ಕಿರುಕುಳಕ್ಕೆ ಒಂದು ವರ್ಷದ ಮಗು ತನ್ನ ತಂದೆ ಹಾಗೂ ಅಜ್ಜಿಯಿಂದಲೇ ಕೊಲೆಯಾದ ಹೃದಯ ವಿದ್ರಾವಕ ಘಟನೆ ಬೆಳಗಾವಿಯ ಹುಕ್ಕೇರಿ ತಾಲೂಕಿನ ಕೊಟಬಾಗಿಯಲ್ಲಿ ಡಿ 5 ರ ಮಂಗಳವಾರ ಬೆಳಕಿಗೆ ಬಂದಿದೆ. . ಮೃತ ಮಗುವನ್ನು ಜೋಯೆಲ್ ನಾಮದೇವ ನಡುವಿನಕೇರಿ (1) ಎಂದು ಗುರುತಿಸಲಾಗಿದೆ. ಹಣದ ದಾಹಕ್ಕೆ ಒಳಗಾಗಿ ವರದಕ್ಷಿಣೆಗಾಗಿ ನನ್ನನ್ನು ಪೀಡಿಸುತ್ತಿದ್ದು ಇದೇ ಕಾರಣಕ್ಕಾಗಿ ಪುಟ್ಟ ಮಗುವಿನ ಮೇಲೆ ದ್ವೇಷ ತೀರಿಸಿಕೊಂಡಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ.
ಇನ್ನು ತಾಯಿ ಮಗು ಕಳೆದ ಒಂದು ವರ್ಷದಿಂದ ದಾಂಡೇಲಿಯಲ್ಲಿರುವ ತನ್ನ ತವರು ಮನೆಯಲ್ಲೇ ವಾಸಿಸುತ್ತಿದ್ದು, ಕೇವಲ ಹತ್ತು ದಿನಗಳ ಹಿಂದೆಯಷ್ಟೇ ಮಗುವಿನ ಜತೆಯಾಗಿ ಗಂಡನ ಮನೆಗೆ ಬಂದಿದ್ದರು. ಶುಕ್ರವಾರ ಯಾವುದೋ ನೆಪ ಹೇಳಿ ನನ್ನನ್ನು ಹೊರಗಡೆ ಕಳುಹಿಸಿದ್ದಾರೆ ಬಳಿಕ ನನ್ನ ಮಗುವಿನ ತಂದೆ ಹಾಗೂ ಅಜ್ಜಿ ಸೇರಿ ಕೀಟನಾಶಕವನ್ನು ಸಿಂಪಡಿಸಿ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ಈ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.